DAVANAGEREಸುದ್ದಿ

ಪಂಚಮಸಾಲಿ ಪೀಠದ ಸಂಘರ್ಷ: ವಚನಾನಂದ ಶ್ರೀಗಳ ಉಚ್ಚಾಟಿಸಿದ್ದವರೇ ಉಚ್ಚಾಟನೆ! ಟ್ರಸ್ಟಿಗಳಿಗೆ ಶಾಕ್

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಲೆಕ್ಕಪತ್ರದ ಕಿಚ್ಚು ಹತ್ತಿಕೊಂಡಿದ್ದು, ಮಠದ ಆಡಳಿತ ಮಂಡಳಿ ಮತ್ತು ಸ್ವಾಮೀಜಿಗಳ ನಡುವಿನ ಸಂಘರ್ಷ ಬೀದಿಗೆ ಬಂದಿದೆ. ಸುಮಾರು 25 ಕೋಟಿ ರೂಪಾಯಿಗಳ ಬೃಹತ್ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದಂತೆಯೇ, ಮಠದ ಆವರಣದಲ್ಲಿ “ಲೆಕ್ಕ ಕೊಡಿ” ಅಭಿಯಾನ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮಠದ ಟ್ರಸ್ಟಿಗಳು ಭಕ್ತರ ಸಮ್ಮುಖದಲ್ಲೇ 2008 ರಿಂದ 2026ರ ವರೆಗಿನ ಸಂಪೂರ್ಣ ಲೆಕ್ಕ ನೀಡಲು ಮುಂದಾಗಿದ್ದಾರೆ. ಮಠದ ಆವರಣದಲ್ಲಿ ಎರಡು ಗುಂಪುಗಳು ಮುಖಾಮುಖಿಯಾಗುವ ಸಾಧ್ಯತೆ ಇರುವುದರಿಂದ ಹರಿಹರ ಪೀಠದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಟ್ರಸ್ಟ್‌ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ನೇತೃತ್ವದಲ್ಲಿ ಈ ಲೆಕ್ಕ ಸಲ್ಲಿಕೆ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ವಚನಾನಂದ ಸ್ವಾಮೀಜಿಗಳಿಗೂ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. ಮಠದ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಬಂದ ದೇಣಿಗೆ, ಆಸ್ತಿ-ಪಾಸ್ತಿ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡುವುದಾಗಿ ಟ್ರಸ್ಟಿಗಳು ಘೋಷಿಸಿದ್ದಾರೆ. ಆದರೆ, ಇನ್ನೊಂದೆಡೆ ವಚನಾನಂದ ಸ್ವಾಮೀಜಿ ಮತ್ತು ಟ್ರಸ್ಟಿಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಮಠದ ಆವರಣದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರತಿ ವಾಹನಗಳ ಸಂಚಾರವನ್ನು ವಿಡಿಯೋ ಮಾಡುವಂತೆ ಸೂಚಿಸಲಾಗಿದ್ದು, ನಾಲ್ಕು ದಿಕ್ಕುಗಳಲ್ಲೂ ಕಣ್ಗಾವಲು ಇರಿಸಲಾಗಿದೆ.

ಈ ಹೈಪ್ರೊಫೈಲ್ ಕೇಸ್‌ಗೆ ಈಗ ವಚನಾನಂದ ಶ್ರೀಗಳು ಮತ್ತು ಸಂಘದ ಅಧ್ಯಕ್ಷ ಸೋಮನಗೌಡ ಅವರ ವೈರಲ್ ವಿಡಿಯೋಗಳು ಹೊಸ ಟ್ವಿಸ್ಟ್ ನೀಡಿವೆ. ಭಕ್ತರೊಂದಿಗೆ ಶ್ರೀಗಳು ನಡೆಸಿದ ವಾಗ್ವಾದದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಟ್ರಸ್ಟಿಗಳಾದ ಬಿ.ಸಿ. ಉಮಾಪತಿ ಮತ್ತು ಎಚ್.ಎಸ್. ನಾಗರಾಜ್ ಅವರು ಸ್ವಾಮೀಜಿಗಳ ವಿರುದ್ಧ ತಿರುಗಿಬಿದ್ದಿದ್ದು, ಲೆಕ್ಕ ಪಡೆದು ಮಠ ಖಾಲಿ ಮಾಡುವಂತೆ ನೇರವಾಗಿ ತಾಕೀತು ಮಾಡಿದ್ದಾರೆ. ಉಚ್ಚಾಟನೆಯ ನಾಟಕಗಳು ನಡೆಯುತ್ತಿರುವ ನಡುವೆಯೇ, ಪಂಚಮಸಾಲಿ ರಾಜ್ಯ ಸಂಘದ ಅಧ್ಯಕ್ಷ ಸೋಮನಗೌಡ ಅವರ ಎಂಟ್ರಿಯಿಂದ ಪ್ರಕರಣ ಮತ್ತಷ್ಟು ಸಂಕೀರ್ಣಗೊಂಡಿದೆ.

ಮಠದ ಇತಿಹಾಸದಲ್ಲೇ ಮೊದಲ ಬಾರಿಗೆ 25 ಕೋಟಿ ರೂಪಾಯಿಗಳ ಅವ್ಯವಹಾರದ ಆರೋಪ ಕೇಳಿಬಂದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಹರಜಾತ್ರೆಯು ಕೇವಲ ರಾಜಕೀಯ ವೇದಿಕೆಯಾಗಿತ್ತು ಎಂಬ ಆರೋಪದ ಬೆನ್ನಲ್ಲೇ, ಮಠದ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಟ್ರಸ್ಟಿಗಳನ್ನು ಉಚ್ಚಾಟಿಸುವ ಅಧಿಕಾರ ಯಾರಿಗಿದೆ ಎಂಬ ಕಾನೂನು ಸಮರವೂ ಶುರುವಾಗಿದ್ದು, ಮಠದ ಆಂತರಿಕ ಕಲಹ ಈಗ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಈ ಲೆಕ್ಕಪತ್ರ ಸಲ್ಲಿಕೆ ಅಭಿಯಾನವು ಹರಿಹರ ಪೀಠದ ಭವಿಷ್ಯವನ್ನು ಹೇಗೆ ಬದಲಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.

Comments (0)

Your email address will not be published. Required fields are marked *

Back to top button