ಜಮೀರಣ್ಣ ಇಷ್ಟು ದೊಡ್ಡ ದ್ರೋಹ ಮಾಡ್ತಾರೆ ಅನ್ಕೊಂಡಿರಲಿಲ್ಲ-ಸಮರ್ಥ್ ಶಾಮನೂರು ಭಾವುಕ!
samrth shamanur criticises Zameer for Backstab

ದಾವಣಗೆರೆ: “ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ವತಃ ನಮ್ಮ ಮನೆಗೆ ಬಂದು ಮಾತನಾಡಿದ್ದನ್ನು ನಾನು ಸಂಪೂರ್ಣವಾಗಿ ನಂಬಿದ್ದೆ. ಆದರೆ ಒಳಗೊಳಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆನ್ನಿಗೆ ಇರಿಯುವ ಷಡ್ಯಂತ್ರ ನಡೆಸುತ್ತಾರೆ ಎಂದು ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಕಾಂಗ್ರೆಸ್ ಶಾಸಕ ಸಮರ್ಥ್ ಶಾಮನೂರು ತೀವ್ರ ಬೇಸರ ಹೊರಹಾಕಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡುವಂತೆ ಸಚಿವ ಜಮೀರ್ ಅಹಮದ್ ಖಾನ್ ಅವರು ಕೆಎಂಡಿಸಿ ನಿರ್ದೇಶಕ ಸಿರಾಜ್ ಮೊಹಮ್ಮದ್ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಲೀಕ್ ವಿವಾದಕ್ಕೆ ಸಮರ್ಥ್ ಶಾಮನೂರು ಮಾಧ್ಯಮಗಳ ಮುಂದೆ ಮುಕ್ತವಾಗಿ ಮಾತನಾಡಿದ್ದಾರೆ.

“ಆಡಿಯೋದಲ್ಲಿ ಇರೋದು ನೂರಕ್ಕೆ ನೂರು ಸತ್ಯ, ಅದು ಓಪನ್ ಸೀಕ್ರೆಟ್!”
ಸಚಿವ ಜಮೀರ್ ಅಹಮದ್ ಈ ಆಡಿಯೋವನ್ನು ‘ನಕಲಿ ಮತ್ತು ಎಐ (AI) ಸೃಷ್ಟಿ’ ಎಂದು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಕೌಂಟರ್ ಕೊಟ್ಟಿರುವ ಶಾಸಕ ಸಮರ್ಥ್ ಶಾಮನೂರು, ಆಡಿಯೋದಲ್ಲಿ ಇರುವುದೆಲ್ಲಾ ಸತ್ಯ ಎಂದಿದ್ದಾರೆ. ದಾವಣಗೆರೆ ದಕ್ಷಿಣದ ಉಪಚುನಾವಣೆಯಲ್ಲಿ ಒಳಗೊಳಗೆ ಏನೆಲ್ಲಾ ರಾಜಕೀಯ ಷಡ್ಯಂತ್ರಗಳು ನಡೆದಿದ್ದವು ಎಂಬುದು ಇಡೀ ಊರಿಗೆ ಗೊತ್ತಿತ್ತು. ಅದು ‘ಓಪನ್ ಸೀಕ್ರೆಟ್’ ಆಗಿತ್ತು, ಈಗ ಆಡಿಯೋ ರೂಪದಲ್ಲಿ ಸಾಕ್ಷಿ ಜನರ ಮುಂದೆ ಬಂದಿದೆ. ಈ ವೈರಲ್ ಕ್ಲಿಪ್ ನೋಡಿದರೆ ಕೇವಲ ನಮ್ಮ ಪಕ್ಷದ ಒಳಗಿನವರು ಮಾತ್ರವಲ್ಲ, ಎಸ್‌ಡಿಪಿಐ (SDPI), ಪಕ್ಷೇತರ ಅಭ್ಯರ್ಥಿಗಳು ಹಾಗೂ ಬಿಜೆಪಿಯವರು (BJP) ಒಟ್ಟಾಗಿ ಸೇರಿಕೊಂಡು ನನ್ನನ್ನು ಸೋಲಿಸಲು ಎಷ್ಟು ಒಗ್ಗಟ್ಟಿನಿಂದ ಷಡ್ಯಂತ್ರ ರೂಪಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಗ್ರಾಮದೇವತೆ ದುಗ್ಗಮ್ಮನ ಆಶೀರ್ವಾದದಿಂದ ಇಂದು ಸತ್ಯ ಏನೆಂಬುದು ಎಲ್ಲರ ಮುಂದೆ ಹೊರಗೆ ಬಂದಿದೆ. ಅಧರ್ಮ ಮಾಡಿದವರಿಗೆ ಆ ದೇವರೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ.
ಮುಸ್ಲಿಂ ಸಮುದಾಯ ಮೋಸ ಮಾಡಿಲ್ಲ, ಮಾಡಿದ್ದು ‘ಶೇಮ್‌ಲೆಸ್ ಲೀಡರ್ಸ್’!
ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ನಡೆ ಹಾಗೂ ಕಾಂಗ್ರೆಸ್ ನಾಯಕರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡ ಸಮರ್ಥ್ ಶಾಮನೂರು, ಲೀಡರ್‌ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.”ದಾವಣಗೆರೆಯ ಮುಸ್ಲಿಂ ಸಮುದಾಯದ ಬಾಂಧವರು ನನಗೆ ಸಂಪೂರ್ಣವಾಗಿ ಮತ ಹಾಕಿ ಕೈ ಹಿಡಿದಿದ್ದಾರೆ, ಅವರು ನಮಗೆ ಮೋಸ ಮಾಡಿಲ್ಲ. ಆದರೆ, ಕೆಲವು ‘ಶೇಮ್‌ಲೆಸ್ ಲೀಡರ್ಸ್’ (ನಾಚಿಕೆಗೆಟ್ಟ ನಾಯಕರು) ತಮ್ಮ ಸ್ವಾರ್ಥಕ್ಕಾಗಿ, ಸ್ವಂತ ಬೇಳೆ ಬೇಯಿಸಿಕೊಳ್ಳಲು ಸಮಾಜವನ್ನು ದಿಕ್ಕು ತಪ್ಪಿಸಿ ಇಂತಹ ಕೀಳು ಮಟ್ಟದ ಷಡ್ಯಂತ್ರ ಮಾಡಿದ್ದಾರೆ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಪಕ್ಷದ ಧರ್ಮ. ಆದರೆ ಇವರು ಒಳಗೊಳಗೆ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದರ ಬಗ್ಗೆ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದು ಅವರಿಗೆ ಬಿಟ್ಟಿದ್ದು. ನಮ್ಮನ್ನು ನಮ್ಮ ಕಾಯಕ ಮತ್ತು ಜನರೇ ಕಾಪಾಡುತ್ತಾರೆ.” ಎಂದು ಕಿರಿಯ ಶಾಸಕರು ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿ, ಎಸ್‌ಡಿಪಿಐ ಹಾಗೂ ಪಕ್ಷೇತರರು ಎಲ್ಲರೂ ಒಳಗೊಳಗೆ ಒಂದೇ ಪಾರ್ಟಿಯಾಗಿ ಕಾಂಗ್ರೆಸ್ ವಿರುದ್ಧ ಕಾರ್ಯನಿರ್ವಹಿಸಿದ್ದರು. ಇಷ್ಟೆಲ್ಲಾ ಮಹಾ ಷಡ್ಯಂತ್ರಗಳು ಮತ್ತು ಆಂತರಿಕ ದ್ರೋಹಗಳು ನಡೆದಿದ್ದರೂ ಕೂಡ ದಾವಣಗೆರೆಯ ಧರ್ಮಪ್ರಜ್ಞೆಯುಳ್ಳ ಮತದಾರ ಪ್ರಭುಗಳು ನನ್ನ ಕೈ ಬಿಡಲಿಲ್ಲ. ಆ ಕುತಂತ್ರಿಗಳಿಗೆ ಗೆಲ್ಲಲು ಸಾಧ್ಯವಾಗಲಿಲ್ಲ, ಜನರು ನನಗೆ ವಿಜಯದ ಮಾಲೆ ಹಾಕಿದ್ದಾರೆ ಎಂದು ಸಮರ್ಥ್ ಶಾಮನೂರು ಹೆಮ್ಮೆಯಿಂದ ನುಡಿದರು.
ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ಡಿಸಿಎಂ ಹುದ್ದೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಈ ಪ್ರಮುಖ ಸಂದರ್ಭದಲ್ಲೇ, ಜಮೀರ್ ಅಹಮದ್ ಅವರ ವಿರುದ್ಧ ಸ್ವಪಕ್ಷದ ಶಾಸಕ ಸಮರ್ಥ್ ಶಾಮನೂರು ಅವರೇ ನೇರ ಬಂಡಾಯ ಎದ್ದಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಭಾರಿ ತಲೆನೋವಾಗಿ ಪರಿಣಮಿಸಿದೆ.
#FreedomTV #SamarthShamanur #ZameerAhmedKhan #DavanagereSouth #ByElectionControversy #CongressAudioLeak #ShamanurFamily #PoliticalBetrayal #KarnatakaPolitics #CongressVsCongress #SDPI #BJP #DavanagereNews #BreakingNewsಕನ್ನಡ




