Maharashtra

‘ಲಡ್ಕಿ ಬಹೀನ್’ ಯೋಜನೆಯಲ್ಲಿ 80 ಲಕ್ಷ ನಕಲಿ ಫಲಾನುಭವಿಗಳು!

Ladki-Bahin scheme-80 fraud members

ಮುಂಬೈ: ಚುನಾವಣೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಮಹಿಳೆಯರಿಗೆ ದೊಡ್ಡ ಶಾಕ್ ನೀಡಿದೆ. ಮಹಾರಾಷ್ಟ್ರದ ಅತ್ಯಂತ ಜನಪ್ರಿಯ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಲಡ್ಕಿ ಬಹೀನ್’ (Ladki Bahin) ಯೋಜನೆಯನ್ನು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಭಾರಿ ಪರಿಷ್ಕರಣೆ ಮಾಡಿದ್ದು, ಬರೋಬರಿ 80 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಹೊರಹಾಕಿದೆ.


ವಿಧಾನಸಭಾ ಚುನಾವಣೆಗೆ ಮುನ್ನ ಮಹಿಳಾ ಮತದಾರರನ್ನು ಸೆಳೆಯಲು ಮಹಾಯುತಿ ಮೈತ್ರಿಕೂಟವು ಪ್ರತಿ ಅರ್ಹ ಮಹಿಳೆಗೆ ಮಾಸಿಕ 1500 ರೂಪಾಯಿ ನೀಡುವುದಾಗಿ ಘೋಷಿಸಿ ಜಾರಿಗೆ ತಂದಿತ್ತು. ಆದರೆ ಈಗ ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಇ-ಕೆವೈಸಿ (e-KYC) ಕಡ್ಡಾಯಗೊಳಿಸಿದ ಬೆನ್ನಲ್ಲೇ ಈ ಬೃಹತ್ ಆಪರೇಷನ್ ನಡೆದಿದೆ.

2.5 ಕೋಟಿಯಿಂದ 1.7 ಕೋಟಿಗೆ ಕುಸಿದ ಫಲಾನುಭವಿಗಳ ಸಂಖ್ಯೆ!


ಸರ್ಕಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸುತ್ತಿದ್ದಂತೆ ಯೋಜನೆಯಲ್ಲಿದ್ದ ಫಲಾನುಭವಿಗಳ ಸಂಖ್ಯೆ ದಿಢೀರ್ ಕುಸಿತ ಕಂಡಿದೆ. ಈ ಮೊದಲು 2.5 ಕೋಟಿಯಷ್ಟಿದ್ದ ಒಟ್ಟು ಫಲಾನುಭವಿಗಳ ಸಂಖ್ಯೆ ಈಗ ಕೇವಲ 1.7 ಕೋಟಿಗೆ ಇಳಿದಿದೆ. 80 ಲಕ್ಷ ಮಹಿಳೆಯರನ್ನು ಅನರ್ಹಗೊಳಿಸಲು ಸರ್ಕಾರ ನೀಡಿರುವ ಪ್ರಮುಖ ಕಾರಣಗಳೆಂದರೆ ಸುಮಾರು 50 ರಿಂದ 55 ಲಕ್ಷ ಮಹಿಳೆಯರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ. ಸುಮಾರು 12 ಲಕ್ಷ ಮಹಿಳೆಯರು ಸರ್ಕಾರದ ವಾರ್ಷಿಕ ಆದಾಯ ಮಿತಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ್ದು, ಐಟಿ (Income Tax) ಪಾವತಿದಾರರಾಗಿದ್ದಾರೆ.
4.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಯೋಜನೆಗೆ ನಿಗದಿಪಡಿಸಿದ್ದ 65 ವರ್ಷಗಳ ಗರಿಷ್ಠ ವಯೋಮಿತಿಯನ್ನು ಮೀರಿದ್ದಾರೆ. ಸುಮಾರು 5 ಲಕ್ಷ ಮಹಿಳೆಯರು ಈಗಾಗಲೇ ಸರ್ಕಾರದ ‘ನಮೋ ಶೇತ್ಕರಿ’ (ರೈತ) ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆಯುತ್ತಿದ್ದಾರೆ.

ಫಡ್ನವೀಸ್ ಸರ್ಕಾರದ ಈ ದಿಢೀರ್ ಕ್ರಮಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ತೀವ್ರ ಆಕ್ರೋಶ ಹೊರಹಾಕಿವೆ. “ಚುನಾವಣೆಯಲ್ಲಿ ಮಹಿಳೆಯರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಇಂತಹ ಕಠಿಣ ನಿಯಮಗಳನ್ನು ತಂದು ಬಡ ಮಹಿಳೆಯರಿಗೆ ವಂಚಿಸುತ್ತಿದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರುವ ಅದೆಷ್ಟೋ ನೈಜ ಫಲಾನುಭವಿಗಳ ಖಾತೆಗೂ ಕಳೆದ ಕೆಲವು ತಿಂಗಳುಗಳಿಂದ ಹಣ ಜಮೆಯಾಗುತ್ತಿಲ್ಲ” ಎಂದು ವಿಪಕ್ಷ ನಾಯಕರು ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರ ನಕಲಿ ಫಲಾನುಭವಿಗಳನ್ನು ತಡೆಗಟ್ಟುವ ನೆಪದಲ್ಲಿ ಬಜೆಟ್ ಹೊರೆ ಕಡಿಮೆ ಮಾಡಿಕೊಳ್ಳಲು ಈ ಆಪರೇಷನ್ ನಡೆಸಿದೆ ಎನ್ನಲಾಗುತ್ತಿದ್ದು, ಸದ್ಯ ಅಲ್ಲಿನ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

#FreedomTV #LadkiBahinYojana #MaharashtraPolitics #DevendraFadnavis #FadnavisGovt #eKYC #GuaranteeSchemes #MumbaiNews #WomenEmpowerment #BudgetBurden #PoliticalControversy #BreakingNewsಕನ್ನಡ #IndiaUpdates

Comments (0)

Your email address will not be published. Required fields are marked *

Back to top button