Freedom TV

MLC ಶಶೀಲ್ ನಮೋಶಿ ಕುಟುಂಬದಲ್ಲಿ ಆಸ್ತಿ ವಿವಾದ

ಕಲಬುರಗಿ: ರಾಜಕೀಯವಾಗಿ ಪ್ರಭಾವಿಯಾಗಿರುವ ಬಿಜೆಪಿ ಎಂಎಲ್‌ಸಿ ಶಶೀಲ್ ನಮೋಶಿ ಅವರ ಕುಟುಂಬದ ಆಸ್ತಿ ವಿವಾದ ಈಗ ಬೀದಿಗೆ ಬಂದಿದೆ. ಹೈದರಾಬಾದ್‌ನಲ್ಲಿ ವೈದ್ಯಕೀಯ ವೃತ್ತಿ ಮುಗಿಸಿ ನಿವೃತ್ತರಾಗಿ ತವರಿಗೆ ಬಂದ ಸ್ವಂತ ಅಣ್ಣ ಮತ್ತು ಅವರ ಕುಟುಂಬಕ್ಕೆ ಮನೆಯೊಳಗೆ ಪ್ರವೇಶ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿರುವ ಆರೋಪ ಕೇಳಿಬಂದಿದೆ.

ಬೀದಿಗೆ ಬಂತು ಅಣ್ಣತಮ್ಮಂದಿರ ಆಸ್ತಿ ಕಲಹ

ರಸ್ತೆಯಲ್ಲೇ ರಾತ್ರಿ ಕಳೆದ ಡಾ.ಅನೀಲ್ ನಮೋಶಿ ಕುಟುಂಬ!
ಶಶೀಲ್ ನಮೋಶಿ ಅವರ ಅಣ್ಣ ಡಾ. ಅನೀಲ್ ನಮೋಶಿ ಮತ್ತು ಅವರ ಪತ್ನಿ ಅನ್ನಪೂರ್ಣ ಅವರು ಭಾನುವಾರ ರಾತ್ರಿಯಿಡೀ ತಮ್ಮ ಲಗೇಜ್‌ಗಳ ಸಮೇತ ರಸ್ತೆಯಲ್ಲೇ ಕಾಲ ಕಳೆದಿದ್ದಾರೆ. ಹೈದರಾಬಾದ್‌ನಿಂದ ನಿವೃತ್ತಿಯಾಗಿ ಸ್ವಂತ ಮನೆಗೆ ಬಂದ ವೈದ್ಯರಿಗೆ ತಮ್ಮದೇ ಮನೆಯ ಬಾಗಿಲು ತೆರೆಯದ ಕಾರಣ, ಅವರು ಚಳಿ ಮತ್ತು ಗಾಳಿಯಲ್ಲೇ ಬೀದಿಯಲ್ಲಿ ಕುಳಿತು ಪ್ರತಿಭಟಿಸುವಂತಾಗಿದೆ.

ಆಸ್ತಿ ವಿವಾದದ ಹಿನ್ನೆಲೆ ಏನು?
ಡಾ. ಅನೀಲ್ ನಮೋಶಿ ಅವರು ಹೇಳುವಂತೆ ಈಗ ಶಶೀಲ್ ನಮೋಶಿ ವಾಸವಿರುವ ಮನೆಯ ಎಲ್ಲಾ ಅಧಿಕೃತ ದಾಖಲೆಗಳು ಅನೀಲ್ ನಮೋಶಿ ಅಂದರೆ ನನ್ನ ಮತ್ತು ನಮ್ಮ ತಾಯಿಯ ಹೆಸರಿನಲ್ಲಿದೆ.ಈ ಹಿಂದೆ ಶಶೀಲ್ ನಮೋಶಿ ಅವರಿಗೆ ಕುಟುಂಬದವರು ನೀಡಲಾಗಿದ್ದ ಸೈಟನ್ನು ಅವರು ಮೊದಲೇ ಮಾರಾಟ ಮಾಡಿದ್ದಾರೆ. ಆ ಬಳಿಕ ನಾವಿಬ್ಬರೂ ಸೇರಿ ಈಗಿರುವ ನಿವಾಸವನ್ನು ನಿರ್ಮಿಸಿದೆವು. “ಮನೆಗೆ ಮೇಲೆ ನಮಗೂ ಹಕ್ಕಿದ್ದರೂ ಶಶೀಲ್ ನಮೋಶಿ ಅಧಿಕಾರ ಮತ್ತು ಪ್ರಭಾವ ಬಳಸಿ ನಮ್ಮನ್ನು ಒಳಗೆ ಸೇರಿಸಿಕೊಳ್ಳುತ್ತಿಲ್ಲ,” ಎಂದು ಅನೀಲ್ ನಮೋಶಿ ಅಳಲು ತೋಡಿಕೊಂಡಿದ್ದಾರೆ.

ಪತ್ನಿಯ ಆಕ್ರೋಶ: “ನಾವು ರಾತ್ರಿಯಿಡೀ ರಸ್ತೆಯಲ್ಲೇ ಸಾಮಾನುಗಳನ್ನಿಟ್ಟುಕೊಂಡು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ. ಲಗೇಜ್‌ಗಳೊಂದಿಗೆ ನಾವು ಕುಳಿತಿದ್ದರೂ, ಶಶೀಲ್ ನಮೋಶಿ ಮಾತ್ರ ಮನೆಯೊಳಗೆ ಇದ್ದುಕೊಂಡು ಮೌನಕ್ಕೆ ಶರಣಾಗಿರುವುದು ಎಷ್ಟರ ಮಟ್ಟಿಗೆ ಸರಿ.ಎಂದು ಅನೀಲ್ ಅವರ ಪತ್ನಿ ಅನ್ನಪೂರ್ಣ ಪ್ರಶ್ನಿಸಿದ್ದಾರೆ.

ರಾಜಕೀಯ ವಲಯದಲ್ಲಿ ದೊಡ್ಡ ನಾಯಕರಾಗಿ ಹೆಸರು ಪಡೆದಿರುವ ಶಶೀಲ್ ನಮೋಶಿ ಅವರು ತಮ್ಮದೇ ಕುಟುಂಬದ ಹಿರಿಯ ಸದಸ್ಯರನ್ನು ಬೀದಿಗೆ ತಳ್ಳಿರುವ ಘಟನೆ ಈಗ ಜಿಲ್ಲಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಈ ವಿವಾದ ಪೊಲೀಸರ ಮೆಟ್ಟಿಲೇರುತ್ತದೆಯೇ ಅಥವಾ ಮಾತುಕತೆಯ ಮೂಲಕ ಇತ್ಯರ್ಥವಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

#ShasheelNamoshi #FamilyDispute #PropertyDispute #KalaburagiNews #MLCNamoshi #DrAnilNamoshi #BJP #FreedomTV #BreakingNews #FamilyFeud

Comments (0)

Your email address will not be published. Required fields are marked *

Back to top button