IFS ಪರೀಕ್ಷೆಯಲ್ಲಿ ಅರಳಿದ ಗ್ರಾಮೀಣ ಪ್ರತಿಭೆ

ರೈತನ ಮಗ IFS ಪರೀಕ್ಷೆಯಲ್ಲಿ ಭಾರತಕ್ಕೇ ಪ್ರಥಮ

ಬೆಳಗಾವಿ: IFS ಫಲಿತಾಂಶ ಪ್ರಕಟವಾಗಿದ್ದು ಅಥಣಿಯ ರೈತನ ಮಗ ದೇಶಕ್ಕೆ ಫಸ್ಟ್ ರ್ಯಾಂಕ್ ಪಡೆದಿದ್ದಾನೆ. ಈ ಗ್ರಾಮೀಣ ಪ್ರತಿಭೆಯ ಅದ್ವಿತೀಯ ಸಾಧನೆ ಕಂಡು ಇಡೀ ಬೆಳಗಾವಿ ಜಿಲ್ಲೆ ಸಂತೋಷದಲ್ಲಿ ತೇಲಾಡುತ್ತಿದೆ. ಶುಕ್ರವಾರ ಪ್ರಕಟವಾದ ಭಾರತೀಯ ಅರಣ್ಯ ಸೇವೆ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಪರೀಕ್ಷೆಯ ಫಲಿತಾಂಶದಲ್ಲಿ ಕನ್ನಡಿಗನಿಗೆ ಪ್ರಥಮ ರ್ಯಾಂಕ್ ಲಭಿಸಿದೆ.ಐಎಫ್ಎಸ್ ಪರೀಕ್ಷೆಯಲ್ಲಿ ಅಥಣಿ ತಾಲೂಕಿನ ಸಾಮಾನ್ಯ ರೈತನ ಪುತ್ರ ಬಸವರಾಜ್ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ದೇಶಕ್ಕೇ ಮಾದರಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಸಾಮಾನ್ಯ ರೈತನ ಮಗನಾಗಿದ್ದು ಈ ಅದ್ವಿತೀಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸತತ ಪರಿಶ್ರಮದಿಂದ ಬಸವರಾಜ್ ಅವರು ಕೇವಲ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಟಾಪರ್ ಆಗಿದ್ದಾರೆ. ಇವರ ಅಪ್ರತಿಮ ಸಾಧನೆಯಿಂದ ಕುಟುಂಬಸ್ಥರಲ್ಲಿ ಹಾಗೂ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
“ಛಲವೊಂದಿದ್ದರೆ ಬೆಟ್ಟವನ್ನೂ ಕೂಡ ಅಗೆಯಬಹುದು” ಎನ್ನುವ ಮಾತನ್ನು ಈ ಯುವಕ ಸಾಬೀತುಪಡಿಸಿದ್ದು, ಗ್ರಾಮೀಣ ಭಾಗದ ಪ್ರತಿಭೆಗಳು ಕಡಿಮೆಯೇನಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ: ಅಪ್ಪಟ ಗ್ರಾಮೀಣ ಪರಿಸರದಲ್ಲೇ ಬೆಳೆದ ಬಸವರಾಜ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಸವದಿಯಲ್ಲೇ ಪೂರೈಸಿದರು.ಪ್ರೌಢ ಶಿಕ್ಷಣವನ್ನು ಅಥಣಿ ಪಟ್ಟಣದಲ್ಲಿ ಮುಗಿಸಿ
ಪದವಿ ವ್ಯಾಸಂಗವನ್ನು ಶಿರಸಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ಪಡೆದರು ನಂತರ ಅವರ ಕಣ್ಣು ನೆಟ್ಟಿದ್ದು ನಾಗರಿಕ ಸೇವಾ ಪರೀಕ್ಷೆಗಳ ಮೇಲೆ.
ಯುಪಿಎಸ್ಸಿ ಸಿದ್ಧತೆ: ಪದವಿ ಮುಗಿಯುತ್ತಿದ್ದಂತೆಯೇ ಬೆಂಗಳೂರಿಗೆ ಶಿಫ್ಟ್ ಆದ ಬಸವರಾಜ್, ಅಲ್ಲಿ ಯುಪಿಎಸ್ಸಿ ಪರೀಕ್ಷೆಗಾಗಿ ಹಗಲಿರುಳು ಕಠಿಣ ಸಿದ್ಧತೆ ನಡೆಸಿದ್ದರು.”ಕೋಚಿಂಗ್ ಅಲ್ಲ, ಮಾರ್ಗದರ್ಶನ ಮುಖ್ಯ” ಎನ್ನುವ ಬಸವರಾಜ್ ತಮ್ಮ ಈ ಅಮೋಘ ಸಾಧನೆಯ ಕುರಿತು ಫ್ರೀಡಂ ಟಿವಿಗಾಗಿ ಮಾಹಿತಿ ಹಂಚಿಕೊಂಡ ಬಸವರಾಜ್, “ಓರ್ವ ರೈತನ ಮಗನಾಗಿ ಈ ಹಂತಕ್ಕೆ ತಲುಪಿದ್ದು ನನಗೆ ಅತೀವ ಹೆಮ್ಮೆ ತಂದಿದೆ. ನಾನು ಯಾವುದೇ ಅತಿರೇಕದ ವಿಶೇಷ ಕೋರ್ಸ್ಗಳ ಮೊರೆ ಹೋಗಲಿಲ್ಲ. ಹಿರಿಯರ ನಿರಂತರ ಮಾರ್ಗದರ್ಶನ ಹಾಗೂ ಸತತ ಪ್ರಯತ್ನವೇ ನನ್ನನ್ನು ಈ ಮಟ್ಟಕ್ಕೆ ತಂದಿದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಊರಲ್ಲಿ ಹಬ್ಬದ ವಾತಾವರಣ!
ಬಸವರಾಜ್ ಐಎಫ್ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಂತೆಯೇ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಗ್ರಾಮದ ಹೆಮ್ಮೆಯ ಪುತ್ರನಿಗೆ ಅದ್ಧೂರಿ ಸ್ವಾಗತ ಕೋರಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿರುವ ಬಸವರಾಜ್, ಇನ್ನು ಎರಡು-ಮೂರು ದಿನಗಳಲ್ಲಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಲಿದ್ದು, ವಿಜಯೋತ್ಸವಕ್ಕೆ ಸಿದ್ಧತೆಗಳು ನಡೆದಿವೆ.
ಫ್ರೀಡಂ ಟಿವಿ ಅಭಿಮತ: “ಕಡು ಬಡತನ ಹಾಗೂ ಗ್ರಾಮೀಣ ಹಿನ್ನೆಲೆಯೂ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬಸವರಾಜ್ ಅವರೇ ಸಾಕ್ಷಿ. ಇಂದಿನ ಯುವ ಪೀಳಿಗೆಗೆ ಇವರು ನಿಜಕ್ಕೂ ಸ್ಫೂರ್ತಿ.
#FreedomTV #SuccessStory #IFSBasavaraj #AthaniPride #UPSCSuccess #FarmersSon #Inspiration #KarnatakaPride




