Freedom TV

ಶಿಕ್ಷಣ, ಆರ್ಥಿಕ ಚೈತನ್ಯದಿಂದ ಅಸ್ಪೃಶ್ಯತೆ ನಿರ್ಮೂಲನೆ: ಜೆ.ಟಿ. ಪಾಟೀಲ

ಬೀಳಗಿ: ಅಸ್ಪೃಶ್ಯತೆ ಎಂಬ ಮಹಾರೋಗವನ್ನು ನಿರ್ಮೂಲನೆ ಮಾಡಲು ಶಿಕ್ಷಣವೇ ಪ್ರಮುಖ ಅಸ್ತ್ರ. ಶಿಕ್ಷಣ ಮತ್ತು ಆರ್ಥಿಕ ಚೈತನ್ಯವಿರುವ ಕುಟುಂಬಗಳಲ್ಲಿ ಅಸ್ಪೃಶ್ಯತೆ ಕಾಣಿಸುವುದಿಲ್ಲ ಎಂದು ಹಟ್ಟಿ ಚಿನ್ನದಗಣಿ ನಿಗಮ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು. ತಾಲೂಕಿನ ಅಮಲಝರಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣಗೊಳಿಸಿ ಅವರು ಮಾತನಾಡಿದರು. ಮನುಷ್ಯ ಶ್ರಮವಿಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯರನ್ನು ಎಲ್ಲಿಯವರೆಗೆ ಸಮಾನವಾಗಿ ಕಾಣುವುದಿಲ್ಲವೋ, ಅಲ್ಲಿಯವರೆಗೆ ಸಾಮಾಜಿಕ ಸಮಸ್ಯೆಗಳಿಗೆ ಅಂತ್ಯವಿಲ್ಲ. ಒಂದು ಹೊತ್ತು ಉಪವಾಸವಿದ್ದರೂ ಪರವಾಗಿಲ್ಲ,ಜಾತಿ ವ್ಯವಸ್ಥೆಯನ್ನು ಕಿತ್ತುಹಾಕಬೇಕಾದರೆ ಪ್ರತಿಯೊಂದು ಕುಟುಂಬದಲ್ಲಿ ಹೆಣ್ಣು–ಗಂಡು ಎಂಬ ಭೇದವಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಎಸ್‌ಸಿ, ಎಸ್‌ಟಿ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ‘ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಿದರೆ ಮಾತ್ರ ಸಾಲದು. ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ. ಪೋಷಕರ ಮುಖದಲ್ಲಿ ನಗು ಮೂಡಬೇಕಾದರೆ ಮಕ್ಕಳು ಶಿಕ್ಷಣವಂತರಾಗಬೇಕು. ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದಾಗಲೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯ ಈಡೇರುತ್ತದೆ’ ಎಂದು ಜೆ.ಟಿ. ಪಾಟೀಲ ಹೇಳಿದರು. ಬಳಿಕ ಸತ್ಯ ಶೋದಕ ರಾಜ್ಯಾಧ್ಯಕ್ಷ ಪರಶುರಾಮ್ ಮಹಾರಾಜನವರ ಮಾತನಾಡಿ,ಅಂಬೇಡ್ಕರ್ ಜಯಂತಿಯನ್ನು ಫೋಟೊ ಪೂಜೆ ಹಾಗೂ ಡಿಜೆ ಸಂಸ್ಕೃತಿಗೆ ಸೀಮಿತಗೊಳಿಸಬಾರದು. ಡಿಜೆ ಬೆನ್ನತ್ತಿ ಸಾಗುವ ಯುವಕರು ಅಂಬೇಡ್ಕರ್ ಅವರ ವಿಚಾರಗಳನ್ನು ಮರೆಯುತ್ತಿದ್ದಾರೆ.ಇನ್ನು ಮುಂದೆ ಜಯಂತಿಯಲ್ಲಿ ಡಿಜೆ ಸಂಸ್ಕೃತಿಗೆ ಕಡಿವಾಣ ಹಾಕಿ,ಅಂಬೇಡ್ಕರ್–ಬಸವಣ್ಣನವರ ವಿಚಾರಧಾರೆ,ಸ್ವಾತಂತ್ರ್ಯ, ಸಮಾನತೆ,ಸಹೋದರತೆ ಮತ್ತು ಸಂವಿಧಾನದ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಯುವಕರು ಮೊಬೈಲ್‌ಗೆ ಸೀಮಿತರಾಗದೆ ಪುಸ್ತಕ ಓದಿ ಜ್ಞಾನ ಸಂಪಾದಿಸಬೇಕು ಎಂದರು.ಮೀಸಲಾತಿ ಸಾಮಾಜಿಕ ನ್ಯಾಯದ ಭಾಗವಾಗಿದ್ದು,ಜಾತಿ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಸವಾಲಾಗಿದ್ದು,ದಲಿತರನ್ನು ಮನುಷ್ಯರಂತೆ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್ ಸ್ವಾಭಿಮಾನದ ಸಂಕೇತವಾಗಿದ್ದು,ಪ್ರತಿಮೆ ನಿರ್ಮಿಸುವುದಕ್ಕಿಂತ ಅವರ ಮಾರ್ಗದಲ್ಲಿ ನಡೆಯುವುದು ಮುಖ್ಯ ಎಂದು ಹೇಳಿದರು. ಪ್ರತಿಮೆ ನಿರ್ಮಾಣಕ್ಕೆ ಭೂದಾನ ಮಾಡಿದ ಗ್ರಾಮದ ಸೋಮನಗೌಡ ಪಾಟೀಲ್ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು,ಇದೆ ವೇಳೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ, ಬೆಳಗಾವಿ ವಿಭಾಗದ ಡಿ ಎಸ್ ಎಸ್ ಸಂಚಾಲಕ ಮಹಾದೇವ ಹಾದಿಮನಿ,ನ್ಯಾಯವಾದಿ ಶರಣಕುಮಾರ ಕಂಬಾಗಿ, ಭೀಮ್ ಆರ್ಮಿ ರಾಜ್ಯಾಧ್ಯಕ್ಷ ಮಾತಿಕುಮಾರ, ಮಾತನಾಡಿದರು,ಸುಕ್ಷೇತ್ರ ಬಬಲಾದಿಯ ಪ,ಪೂ ಸಿದ್ದು ಮುತ್ಯಾ,ಹಾಗೂ ಶ್ರದ್ದಾನಂದ ಆಶ್ರಮ ಜ್ಞಾನಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ,ಊರಿನ ಹನಮಂತಗೌಡ ಪಾಟೀಲ್,ಬಸವರಾಜ್ ಢವಳೇಶ್ವರ, ಆನಂದಪ್ಪ ನಾಯಕ,ಸಿದ್ದಪ್ಪ ಬಳಗಾನೂರ,ಬಸವರಾಜ್ ಹಳ್ಳದಮನಿ,ವಿಠ್ಠಲ್ ಗೋಡೆಪ್ಪನವರ,ಭೀಮಪ್ಪ ತಳವಾರ,ಲೆಂಕೆಪ್ಪ ಮಾದರ,ಶಿವಾನಂದ ಬಿಸನಾಳ, ಶ್ರೀಕಾಂತ್ ಅಮಲಝರಿ ಸೇರಿ ಅನೇಕ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button