ದೀರ್ಘಾವಧಿಯ ಯುರೇನಿಯಂ ಒಪ್ಪಂದಕ್ಕೆ ಭಾರತ-ಉಜ್ಬೇಕಿಸ್ತಾನ್ ಸಹಿ!
India and Uzbekistan sign long-term uranium agreement!

ತಾಷ್ಕೆಂಟ್ : ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ದೀರ್ಘಾವಧಿಯ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದಿದ್ದು, ಇದು ನವದೆಹಲಿಯ ಪರಮಾಣು ಇಂಧನ ರಂಗದ ಅತ್ಯಂತ ದೊಡ್ಡ ಹೆಜ್ಜೆಗಳಲ್ಲಿ ಒಂದೆನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಉಜ್ಬೇಕಿಸ್ತಾನ್ ಭೇಟಿಯ ಸಂದರ್ಭದಲ್ಲಿ ಈ ಮಹತ್ವದ ಘೋಷಣೆ ಹೊರಬಂದಿದೆ.
ಉಜ್ಬೆಕ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಪ್ರಧಾನಿ ಮೋದಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಪರಮಾಣು ವಿದ್ಯುತ್ ಯೋಜನೆಗಳನ್ನು ದೀರ್ಘಕಾಲದವರೆಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿಕೊಂಡು ಹೋಗಲು ಈ ಒಪ್ಪಂದ ನಿರ್ಣಾಯಕ ಬೆಂಬಲ ನೀಡಲಿದೆ.
ಭಾರತದ ಪರಮಾಣು ವಿದ್ಯುತ್ ಕ್ಷೇತ್ರಕ್ಕೆ ನಿರಂತರ ಇಂಧನ ಲಭ್ಯತೆ ಖಚಿತಪಡಿಸಲು ದೀರ್ಘಾವಧಿಯ ಯುರೇನಿಯಂ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದ್ದು, ಇದನ್ನು ಪ್ರಧಾನಿ ಮೋದಿ ಅತಿದೊಡ್ಡ ತೀರ್ಮಾನಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಕೇವಲ ಪರಮಾಣು ಇಂಧನವಷ್ಟೇ ಅಲ್ಲದೆ, ಭಾರತ ಹಾಗೂ ಉಜ್ಬೇಕಿಸ್ತಾನ್ ನಡುವೆ ಮೂರು ಸೋದರ ನಗರ ಮತ್ತು ಸೋದರ ರಾಜ್ಯ ಒಪ್ಪಂದಗಳು ಅಂತಿಮ ಹಂತ ತಲುಪಿವೆ.
ಭಾರತವು ತಮಗೆ ಅತ್ಯಂತ ವಿಶ್ವಾಸಾರ್ಹ ಕಾರ್ಯತಂತ್ರದ ಪಾಲುದಾರ ಎಂದು ಉಜ್ಬೇಕ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಪ್ರಶಂಸಿಸಿದ್ದಾರೆ. ಭಾರತ-ಉಜ್ಬೇಕಿಸ್ತಾನ್ ದ್ವಿಪಕ್ಷೀಯ ವ್ಯಾಪಾರವು ಕಳೆದ ವರ್ಷ ಮೊದಲ ಬಾರಿಗೆ 1 ಬಿಲಿಯನ್ ಡಾಲರ್ ಗಡಿಯನ್ನು ದಾಟಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಉಭಯ ದೇಶಗಳ ಜಂಟಿ ಉದ್ಯಮಗಳು ಏಳು ಪಟ್ಟು ಹೆಚ್ಚಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಈ ಒಪ್ಪಂದದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಹಾಗೂ ಆರ್ಥಿಕ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿದ್ದು, ಭವಿಷ್ಯದಲ್ಲಿ ಪರಸ್ಪರ ಸಹಕಾರ ಹೊಸ ಎತ್ತರಕ್ಕೇರುವ ನಿರೀಕ್ಷೆಯಿದೆ.