bengaluruKalburgiರಾಜಕೀಯ

ಸಿದ್ದರಾಮಯ್ಯ ಕೋಮುವಾದಿ – ಛಲವಾದಿ ನಾರಾಯಣಸ್ವಾಮಿ!

Chalawadi narayanaswamy slams that Siddu and Congress are communal

ಕಲಬುರಗಿ/ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ಆಂತರಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕುರಿತು ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಕ್ಷರಶಃ ಬೆಂಕಿ ಉಗುಳಿದ್ದಾರೆ. “ಕಾಂಗ್ರೆಸ್‌ನವರು ದೇಶದ ಅಥವಾ ರಾಜ್ಯದ ಅಭಿವೃದ್ಧಿಗಾಗಿ ಅಧಿಕಾರ ನಡೆಸುತ್ತಿಲ್ಲ. ಅವರಿಗೆ ಕೇವಲ ಕುರ್ಚಿ ಮತ್ತು ಲೂಟಿ ಮಾಡಲು ಅಧಿಕಾರ ಬೇಕು ಎಂಬುದನ್ನು ಈ ಬೆಳವಣಿಗೆಗಳು ಸಾಬೀತುಪಡಿಸಿವೆ” ಎಂದು ಕಿಡಿಕಾರಿದ್ದಾರೆ.

3 ವರ್ಷಗಳ ಆಡಳಿತದಲ್ಲಿ ಕೇವಲ ಲೂಟಿ !


ಕಾಂಗ್ರೆಸ್‌ನ ಮೂರು ವರ್ಷಗಳ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಛಲವಾದಿ, “ಕಳೆದ ಮೂರು ವರ್ಷಗಳಿಂದ ಈ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲೇ ಮುಳುಗಿದೆ. ಬೆಂಗಳೂರು ಅಭಿವೃದ್ಧಿ ಎಂದು ಹೇಳಿಕೊಂಡು ಸಾವಿರಾರು ಕೋಟಿ ರೂಪಾಯಿ ಹಣವನ್ನು ಲೂಟಿ ಹೊಡೆದಿದ್ದಾರೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅತಿರೇಕದ ಓಲೈಕೆ ರಾಜಕಾರಣ ಮಾಡಿದ್ದಾರೆ. ಇವರಿಗೆ ಅಧಿಕಾರ ಇದ್ದರೆ ಸಾಕು, ಜನರ ಅಭಿವೃದ್ಧಿ ಬೇಡ ಎನ್ನುವ ಮನೋಭಾವನೆ ಇವರದ್ದು. ಮುಂದೆ ಎಂದಿಗೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಸ್ವತಃ ಅವರಿಗೇ ಮನವರಿಕೆಯಾಗಿದೆ. ಹಾಗಾಗಿಯೇ ಈ ಆತುರದ ಅಧಿಕಾರ ಹಸ್ತಾಂತರದ ಸರ್ಕಸ್ ನಡೆಯುತ್ತಿದೆ. ಇನ್ನು ಮುಂದೆ ಈ ಸರ್ಕಾರ ಎಷ್ಟು ದಿನ ಇರುತ್ತದೋ, ಒಂದು ವರ್ಷ ಇರುತ್ತದೋ ಇಲ್ಲವೋ ದೇವರಿಗೇ ಗೊತ್ತು” ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಸಲಿ ಕೋಮುವಾದಿಗಳು!
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರ ವಾಗ್ದಾಳಿ ನಡೆಸಿದ ವಿಪಕ್ಷ ನಾಯಕ, “ಸಿದ್ದರಾಮಯ್ಯನವರು ತಾವು ರಾಜಕೀಯ ನಿವೃತ್ತಿ ಹೊಂದುವುದಿಲ್ಲ ಎನ್ನುತ್ತಾರೆ. ಅವರು ಯಾವಾಗಲೂ ವಿಪಕ್ಷಗಳನ್ನು ಕೋಮುವಾದಿಗಳು ಎಂದು ಕರೆಯುತ್ತಾರೆ. ಆದರೆ ನಾನು ಕೇಳುತ್ತೇನೆ, ಅಸಲಿ ಕೋಮುವಾದಿಗಳು ಯಾರು? ಸಿದ್ದರಾಮಯ್ಯನವರೇ ಅಸಲಿ ಕೋಮುವಾದಿ, ಇಡೀ ಕಾಂಗ್ರೆಸ್ ಪಕ್ಷವೇ ಕೋಮುವಾದಿ! ಸಮಾಜದಲ್ಲಿ ಕೋಮುವಾದವನ್ನು ಹೆಚ್ಚು ಮಾಡುವುದೇ ಸಿದ್ದರಾಮಯ್ಯ ಅವರ ಸಿದ್ದಾಂತ. ಸದಾ ಮಾತೆತ್ತಿದರೆ ಅಹಿಂದ, ಅಹಿಂದ ಎಂದು ಜಪ ಮಾಡುವ ಸಿದ್ದರಾಮಯ್ಯನವರೇ, ನಾನು ಕೇಳುತ್ತೇನೆ… ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಏನಾದರೂ ಬ್ರಾಹ್ಮಣರಾ? ಅವರೂ ಕೂಡ ಹಿಂದುಳಿದ ವರ್ಗದಿಂದ ಬಂದ ಅಹಿಂದ ನಾಯಕರೇ ಅಲ್ವಾ? ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದು ಅವರ ತರಗತಿಯನ್ನು ತೋರಿಸುತ್ತದೆ” ಎಂದು ಆಕ್ರೋಶ ಹೊರಹಾಕಿದರು.

ತೈಲ ದರ ಏರಿಕೆಗೆ ಮೋದಿ ಕಾರಣವಲ್ಲ!
ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ವಿಚಾರವಾಗಿ ಕೇಂದ್ರದ ವಿರುದ್ಧ ಗೂಬೆ ಕೂರಿಸುತ್ತಿರುವ ಕಾಂಗ್ರೆಸ್ ನಡೆಗೆ ತಿರುಗೇಟು ನೀಡಿದ ಛಲವಾದಿ, “ಮಧ್ಯಪ್ರಾಚ್ಯ ದೇಶಗಳಲ್ಲಿ ಭೀಕರ ಯುದ್ಧಗಳು ನಡೆಯುತ್ತಿವೆ. ಜಾಗತಿಕ ಮಟ್ಟದ ಬಿಕ್ಕಟ್ಟಿನ ಕಾರಣದಿಂದಾಗಿ ಇಡೀ ವಿಶ್ವದಲ್ಲೇ ತೈಲ ದರಗಳು ಹೆಚ್ಚಾಗುತ್ತಿವೆ. ಅದಕ್ಕೆ ಪ್ರಧಾನಿ ಮೋದಿಯವರು ಕಾರಣರಲ್ಲ. ಬರೀ ಕೇಂದ್ರ ಸರ್ಕಾರವನ್ನು ನಿಂದಿಸುವುದನ್ನು ಕಾಂಗ್ರೆಸ್ ಬಿಡಬೇಕು. ಕಾಂಗ್ರೆಸ್ಸಿಗರು ಕೇವಲ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಜನವಿರೋಧಿ ಸರ್ಕಾರದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಕೇವಲ ನಾಯಕರ ಮುಖ ಬದಲಾವಣೆಯಿಂದ ಅಥವಾ ಅಧಿಕಾರ ಹಸ್ತಾಂತರದಿಂದ ಈ ನಾಡಿನ ಹಣೆಬರಹ ಬದಲಾಗುವುದಿಲ್ಲ” ಎಂದು ಚಾಟಿ ಬೀಸಿದರು.

#FreedomTV #ChalavadiNarayanaswamy #Kalaburagi #CongressCorruption #SiddaramaiahResignation #DKShivakumarCM #BJPvsCongress #KarnatakaPolitics #FuelPriceHike #LoPChalavadi #CongressOlaisike #BreakingNews #KannadaNews #AhindaPolitics #NarendraModi

Comments (0)

Your email address will not be published. Required fields are marked *

Back to top button