bengaluruರಾಜಕೀಯ

ನಾವೆಲ್ಲಾ ಮಾಜಿಗಳು; ಸಚಿವ ಸಂಪುಟವೇ ಇಲ್ಲ – ಎಂ.ಸಿ.ಸುಧಾಕರ್

Higher Education minister M.C. Sudhakar says no cabinet ministers now

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಆಗಿದೆ. ಈ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ತಾಂತ್ರಿಕ ರಾಜಕೀಯ ಬೆಳವಣಿಗೆಯನ್ನು ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯನವರು ಅಧಿಕೃತವಾಗಿ ರಾಜೀನಾಮೆ ನೀಡಿರುವುದರಿಂದ ತಾಂತ್ರಿಕವಾಗಿ ಇಡೀ ಸಚಿವ ಸಂಪುಟ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲ. ನಾವೆಲ್ಲರೂ ಈಗ ಮಾಜಿ ಸಚಿವರು! ಮುಂದಿನ ನೂತನ ಸಂಪುಟದ ರಚನೆ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ” ಎಂದಿದ್ದಾರೆ.

ಡಿಕೆಶಿ ಮುಖ್ಯಮಂತ್ರಿ- ಯಾವುದೇ ಆತಂಕಗಳಿಲ್ಲ!

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ನಡೆದಿದೆ ಎಂದ ಸುಧಾಕರ್, “ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದಕ್ಕೆ ಯಾವುದೇ ಅಡ್ಡಿ-ಆತಂಕಗಳಿಲ್ಲ. ಕಳೆದ ಆರೇಳು ತಿಂಗಳಿಂದಲೇ ಈ ಸಿಎಂ ಬದಲಾವಣೆ ಪ್ರಕ್ರಿಯೆ ಒಳಗೊಳಗೆ ನಡೆಯುತ್ತಿತ್ತು. ಪಕ್ಷಕ್ಕಾಗಿ ಡಿಕೆಶಿ ಸಾಕಷ್ಟು ಶ್ರಮಿಸಿದ್ದಾರೆ, ಜೈಲಿಗೆ ಹೋಗಿ ಬಂದರೂ ನಿಷ್ಠೆ ಬಿಟ್ಟಿಲ್ಲ. ಹಾಗಾಗಿ ಹೈಕಮಾಂಡ್ ಅವರಿಗೆ ಸಿಎಂ ಆಗಲು ಮುಕ್ತ ಅವಕಾಶ ನೀಡಿದೆ. ಇದಕ್ಕೆ ಸ್ವತಃ ಸಿದ್ದರಾಮಯ್ಯನವರೇ ಬೆಂಬಲ ಸೂಚಿಸುವ ಮೂಲಕ ರಾಜಕಾರಣದಲ್ಲಿ ಉನ್ನತ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಸಿದ್ದರಾಮಣ್ಣ ಸಾಬೀತುಪಡಿಸಿದ್ದಾರೆ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.

ನಾಳೆ ಸಿಎಲ್‌ಪಿ ಸಭೆ: ಡಿಕೆಶಿ ಅಧಿಕೃತ ಆಯ್ಕೆ!
ಮುಂದಿನ ಸಿಎಂ ಆಯ್ಕೆ ಕುರಿತು ನಾಳೆ ಅಧಿಕೃತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ನಡೆಯಲಿದೆ. ಸಭೆಯ ನಿಖರ ಸಮಯ ಮತ್ತು ಸ್ಥಳ ಸದ್ಯದಲ್ಲೇ ಅಧಿಕೃತವಾಗಿ ಪ್ರಕಟವಾಗಲಿದ್ದು, ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗುವುದು. ಇನ್ನು ದಲಿತ ಸಿಎಂ ಸೇರಿದಂತೆ ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯಗಳಿಗೂ ಉನ್ನತ ಅವಕಾಶಗಳು ಸಿಗಲಿವೆ. ನಾವೆಲ್ಲರೂ ಒಟ್ಟಾಗಿ ಶ್ರಮಿಸಿ 2028ರ ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸಾರಥ್ಯಕ್ಕೆ ಸತೀಶ್ ಜಾರಕಿಹೊಳಿ ಸರಿ!
ಇದೇ ವೇಳೆ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಮಾತನಾಡಿದ ಎಂ.ಸಿ. ಸುಧಾಕರ್, “ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಸಾರಥ್ಯ ವಹಿಸುವ ಎಲ್ಲಾ ಯೋಗ್ಯತೆ ಮತ್ತು ಅರ್ಹತೆ ಇದೆ. ಅವರೇ ಸ್ವತಃ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂದಿದ್ದಾರೆ. ಇತ್ತೀಚಿನ ಉಪಚುನಾವಣೆಗಳ ಜವಾಬ್ದಾರಿ ಹೊತ್ತು ಸೈಲೆಂಟ್ ಆಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಿಕೊಂಡು ಬಂದ ಇತಿಹಾಸ ಅವರದ್ದಾಗಿದೆ. ಅವರದ್ದು ಆರ್ಭಟದ ಸಂಘಟನೆಯಲ್ಲ, ನಿಶ್ಯಬ್ದವಾಗಿ ಯಶಸ್ಸು ಕಾಣುವ ವಿಶಿಷ್ಟ ಶೈಲಿ. ಅವರು ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗುತ್ತದೆ” ಎಂದು ಜಾರಕಿಹೊಳಿ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು.

#FreedomTV #MCSudhakar #DKShivakumar #SatishJarkiholi #SiddaramaiahResignation #KarnatakaNewCM #KPCCPresidentRace #CLPMeeting #CongressPowerShift #KarnatakaPolitics #BreakingNews #KannadaNews #CabinetDissolved #CongressHighCommand #BengaluruPolitics

Comments (0)

Your email address will not be published. Required fields are marked *

Back to top button