Ballaryರಾಜಕೀಯ

ಗಣಿನಾಡಿನಲ್ಲಿ ಸಚಿವಗಿರಿಗೆ ಪೈಪೋಟಿ – ಯಾರಿಗೆ ಮಂತ್ರಿ ಭಾಗ್ಯ!

Nagendre, Bharat Reddy and Ganesh Compete for Ministership in new govt

ಬಳ್ಳಾರಿ: ರಾಜ್ಯ ರಾಜಕಾರಣದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರ ಹೊಸ ಸಚಿವ ಸಂಪುಟ ಸೇರಲು ಗಣಿನಗರಿ ಬಳ್ಳಾರಿಯ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಕಸರತ್ತು ಆರಂಭವಾಗಿದೆ. ಹಿರಿತನ, ಜಾತಿ ಸಮೀಕರಣ, ತ್ಯಾಗ ಹಾಗೂ ಯುವ ನಾಯಕತ್ವದ ಆಧಾರದ ಮೇಲೆ ಜಿಲ್ಲೆಯ ಪ್ರಮುಖ ನಾಯಕರು ಮಂತ್ರಿಗಿರಿಗಾಗಿ ದೆಹಲಿಯ ಹೈಕಮಾಂಡ್ ಮತ್ತು ಬೆಂಗಳೂರಿನಲ್ಲಿ ಪ್ರಮುಖ ನಾಯಕರೊಂದಿಗೆ ಸೇರಿ ಭರ್ಜರಿ ಲಾಬಿ ನಡೆಸುತ್ತಿದ್ದಾರೆ.

ಮತ್ತೆ ರೇಸ್‌ನಲ್ಲಿ ಮಾಜಿ ಸಚಿವ ನಾಗೇಂದ್ರ!


ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕಾಗಿ ಮತ್ತೆ ತೀವ್ರ ಕಸರತ್ತು ನಡೆಸುತ್ತಿದ್ದಾರೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಸಚಿವರಾಗಿದ್ದ ನಾಗೇಂದ್ರ ಅವರು, ಬಹುಕೋಟಿ ವಾಲ್ಮೀಕಿ ನಿಗಮ ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆ ರಾಜೀನಾಮೆ ನೀಡಿದ್ದರು. ಆದರೆ, ತಮಗೆ ಮತ್ತೆ ಸಚಿವ ಸ್ಥಾನ ನೀಡುವ ಭರವಸೆಯನ್ನು ಈ ಹಿಂದೆ ಸಿಎಂ ಸಿದ್ದರಾಮಯ್ಯ ನೀಡಿದ್ದರು ಎಂಬ ಅಂಶವನ್ನು ಮುಂದಿಟ್ಟುಕೊಂಡು ನಾಗೇಂದ್ರ ಅವರು ಡಿಕೆಶಿ ಕ್ಯಾಬಿನೆಟ್ ಸೇರಲು ತೆರೆಮರೆಯಲ್ಲಿ ತಂತ್ರ ರೂಪಿಸುತ್ತಿದ್ದಾರೆ.

ಗಣೇಶ್ ಮತ್ತು ಅನ್ನಪೂರ್ಣ ಪೈಪೋಟಿ!
ಕಂಪ್ಲಿ ಕ್ಷೇತ್ರದಿಂದ ಮೂರು ಬಾರಿ ಭರ್ಜರಿ ಗೆಲುವು ಸಾಧಿಸಿರುವ ಶಾಸಕ ಗಣೇಶ್ ಅವರು ಈ ಬಾರಿ ತಮಗೆ ಸಚಿವ ಸ್ಥಾನ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ಸಮೀಕರಣದಡಿ ಜಿಲ್ಲೆಯ ಪ್ರಬಲ ಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಅವರ ಬೆಂಬಲಿಗರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಇತ್ತ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ಹೆಸರು ಕೂಡ ಪ್ರಚಲಿತದಲ್ಲಿದೆ. ಇವರ ಪತಿ, ಬಳ್ಳಾರಿ ಸಂಸದ ಇ. ತುಕಾರಾಂ ಅವರು ಈ ಹಿಂದೆ ಹೈಕಮಾಂಡ್ ಸೂಚನೆ ಮೇರೆಗೆ ಶಾಸಕ ಸ್ಥಾನ ತ್ಯಜಿಸಿ ಲೋಕಸಭೆಗೆ ಸ್ಪರ್ಧಿಸಿದ್ದರು. ಅಂದಿನ ಆ ತ್ಯಾಗ ಮತ್ತು ಅನುಕಂಪದ ಆಧಾರದ ಮೇಲೆ ತಮ್ಮ ಪತ್ನಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ತುಕಾರಾಂ ಹಿರಿಯ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಯುವ ಭರತ್ ರೆಡ್ಡಿ ಸೈಲೆಂಟ್ ಗೇಮ್!
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಯುವಕರ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಪರೋಕ್ಷವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಬಹಿರಂಗವಾಗಿ ಹಕ್ಕು ಮಂಡಿಸದಿದ್ದರೂ, ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಯುವ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ. ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ್ ಮಾತ್ರ ಯಾವುದೇ ಲಾಬಿಗೆ ಮಾಡದೆ ತಟಸ್ಥರಾಗುಳಿದಿದ್ದಾರೆ. ಗಣಿನಗರಿ ಬಳ್ಳಾರಿಯ ಈ ಸಚಿವಗಿರಿಯ ಪೈಪೋಟಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ನೂತನ ಸಿಎಂ ಡಿ.ಕೆ.ಶಿವಕುಮಾರ್ ಯಾರ ಲೆಕ್ಕಾಚಾರಕ್ಕೆ ಮನ್ನಣೆ ನೀಡಲಿದ್ದಾರೆ? ಹಿರಿಯತೆಗೋ ಅಥವಾ ತ್ಯಾಗಕ್ಕೋ? ಯಾರಿಗೆ ಮಂತ್ರಿ ಭಾಗ್ಯ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

#FreedomTV #BallariPolitics #DKSCabinet #KarnatakaPolitics #BNagendra #JNGanesh #AnnapurnaTukaram #NaraBharatReddy #BallariNews #CongressCabinetLobby #STQuota #YoungLeaders #BreakingNewsKarnataka #ಕನ್ನಡಸುದ್ದಿ #ಬಳ್ಳಾರಿ_ರಾಜಕಾರಣ

Comments (0)

Your email address will not be published. Required fields are marked *

Back to top button