Mandyaರಾಜಕೀಯ

16 ಲಕ್ಷ ಬಾಂಗ್ಲಾ ನುಸುಳುಕೋರರು- ಕುಮಾರ್ ಬಂಗಾರಪ್ಪ ಸ್ಫೋಟ!

Ex minister Kumar Bangarappa says 16 lakh bangladeshis living in bangalore illegally

ಮಂಡ್ಯ: ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಕೊಂಚ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣ ಹಾಗೂ ತಮ್ಮ ಸ್ವಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಅತ್ಯಂತ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಕುಮಾರ್ ಬಂಗಾರಪ್ಪ ರಾಜ್ಯದ ಸುರಕ್ಷತೆಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದರು. “ಕರ್ನಾಟಕದಲ್ಲಿ ಸದ್ಯ ಸುಮಾರು 16 ಲಕ್ಷಕ್ಕೂ ಹೆಚ್ಚು ಅಕ್ರಮ ನುಸುಳುಕೋರರಿದ್ದಾರೆ. ವಿಶೇಷವಾಗಿ ರಾಜಧಾನಿ ಬೆಂಗಳೂರಿನ ಹೆಬ್ಬಾಳ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳನ್ನು ಬಾಂಗ್ಲಾದೇಶದ ನುಸುಳುಕೋರರು ತಮ್ಮ ಆವಾಸಸ್ಥಾನ ಮಾಡಿಕೊಂಡಿದ್ದಾರೆ ಎಂದರು.

ಇಷ್ಟೇ ಅಲ್ಲದೆ ಪಾಕಿಸ್ತಾನ ಮತ್ತು ಆಫ್ರಿಕಾ ಮೂಲದವರು ಕೂಡ ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ. ಕೂಡಲೆ ಎಚ್ಚೆತ್ತುಕೊಂಡು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದುವರಿದು, ವಕ್ಫ್ ಆಸ್ತಿ ವಿವಾದ, ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಹಾಗೂ ಅಕ್ರಮ ನುಸುಳಿಕೋರರ ವಿರುದ್ಧ ಬಿಜೆಪಿ ನಿರಂತರವಾಗಿ ದೊಡ್ಡ ಮಟ್ಟದ ಹೋರಾಟ ಮಾಡುತ್ತಾ ಬಂದಿದೆ ಎಂದು ನುಡಿದರು.

ರಾಜಕೀಯವಾಗಿ ಸೈಲೆಂಟ್ -ಕುಮಾರ್ ಬಂಗಾರಪ್ಪ ಸ್ಪಷ್ಟನೆ!


ತಾವು ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ ಎಂಬ ಚರ್ಚೆಗೆ ಉತ್ತರಿಸಿದ ಅವರು, “ಚುನಾವಣೆಯಲ್ಲಿ ಒಂದು ಬಾರಿ ಸೋತ ಮೇಲೆ ರಾಜಕೀಯವಾಗಿ ಕೊಂಚ ಹಿನ್ನೆಡೆ ಅನುಭವಿಸುವುದು ಮತ್ತು ಮೌನಕ್ಕೆ ಶರಣಾಗುವುದು ಸಹಜ. ಆದರೆ ನಾನು ಸುಮ್ಮನೆ ಕೂತಿಲ್ಲ, ನನ್ನ ಕ್ಷೇತ್ರದಲ್ಲಿ ಓಡಾಡುತ್ತಅ ಜನರ ಮಧ್ಯೆಯೇ ಇದ್ದೇನೆ” ಎಂದರು. ಅಲ್ಲದೆ, ಪಕ್ಷದ ಸಂಘಟನಾ ಚುನಾವಣೆಗಳ ಪ್ರಕ್ರಿಯೆ ನಡೆಯುತ್ತಿದ್ದು, ನಮ್ಮ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರು ಬಂದು ಹೋಗಿದ್ದಾರೆ. ಮುಂಬರುವ ಚುನಾವಣೆಗಳಿಗೆ ಇನ್ನು ಬಹಳ ದೂರವಿಲ್ಲ.ಇನ್ಮುಂದೆ ನಮ್ಮ ಚುನಾವಣಾ ಚಟುವಟಿಕೆಗಳು ಮತ್ತು ರಾಜಕೀಯ ಅಬ್ಬರ ಮತ್ತೆ ಅಧಿಕೃತವಾಗಿ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಒಳ ಕಿತ್ತಾಟ- ಬಹಿರಂಗ ಅಸಮಾಧಾನ!
ಇದೇ ವೇಳೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ರಾಜಕೀಯ ಮತ್ತು ಒಳಕಿತ್ತಾಟದ ಕುರಿತು ಕೇಳಲಾದ ಪ್ರಶ್ನೆಗೆ ಅತ್ಯಂತ ನೇರವಾಗಿ ಉತ್ತರಿಸಿದ ಅವರು, “ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ನಿಜ. ಸರಿ ಇಲ್ಲದಿರುವ ವಿಷಯಗಳನ್ನು ನಾನು ಈಗಾಗಲೇ ಪಕ್ಷದ ಆಂತರಿಕ ವೇದಿಕೆಯಲ್ಲಿ ಮುಕ್ತವಾಗಿ ಹೇಳಿದ್ದೇನೆ. ಕೆಲವರು ನಮ್ಮನ್ನು ಮತ್ತು ನಮ್ಮ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಆದರೂ ನಮ್ಮ ಹಕ್ಕು ಪ್ರತಿಪಾದಿಸುವ ಕೆಲಸವನ್ನು ನಾನು ಬಿಡುವುದಿಲ್ಲ. ಈ ಎಲ್ಲಾ ಗೊಂದಲಗಳಿಗೆ ಕೇಂದ್ರ ನಾಯಕತ್ವವೇ ಅಧಿಕೃತವಾಗಿ ಒಂದು ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳಬೇಕಿದೆ” ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕುಮಾರ್ ಬಂಗಾರಪ್ಪ ಅವರ ಈ ನಡೆ ಮತ್ತು ಹೇಳಿಕೆಗಳು ಈಗ ಕೇವಲ ಮಂಡ್ಯ ಮಾತ್ರವಲ್ಲದೆ ಇಡೀ ರಾಜ್ಯ ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿವೆ.

#FreedomTV #KumarBangarappa #MandyaNews #IllegalImmigrants #BengaluruAlert #Mahadevapura #Hebbal #BJPInternalFight #KarnatakaPolitics #ValmikiScamProtest #WaqfBoardControversy #NitinAhir #BreakingNewsKarnataka #ಕನ್ನಡಸುದ್ದಿ

Comments (0)

Your email address will not be published. Required fields are marked *

Back to top button