
ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ತೀವ್ರ ಕುತೂಹಲ, ರಾಜಕೀಯ ಜಿದ್ದಾಜಿದ್ದಿ ಹಾಗೂ ಹೈಡ್ರಾಮಾಗೆ ಕೊನೆಗೂ ಭಾವುಕ ತೆರೆ ಬಿದ್ದಿದೆ. ಅಹಿಂದ ದನಿಯಾಗಿದ್ದ, ದಣಿವರಿಯದ ಹೋರಾಟಗಾರ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸುವ ಮೂಲಕ ಸಿಎಂ ಗದ್ದುಗೆಯಿಂದ ಕೆಳಗೆ ಇಳಿದಿದ್ದಾರೆ. ಇದರೊಂದಿಗೆ ಅವರ ಎರಡನೇ ಅವಧಿಯ ಐತಿಹಾಸಿಕ ಮುಖ್ಯಮಂತ್ರಿ ಆಡಳಿತ ಪರ್ವ ಇತಿಹಾಸದ ಪುಟಗಳನ್ನು ಸೇರಿದೆ.

ಕಾವೇರಿ’ಯಲ್ಲಿ ಕಣ್ಣೀರಿನ ವಿದಾಯ – ಭಾವುಕರಾದ ಸಚಿವರು!
ರಾಜೀನಾಮೆ ಸಲ್ಲಿಕೆಗೂ ಮುನ್ನ ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಚಿವರ ಕೊನೆಯ ‘ಬ್ರೇಕ್ಫಾಸ್ಟ್ ಮೀಟಿಂಗ್’ ನಡೆಯಿತು. ಸದಾ ಜನಸಾಗರ, ಬೆಂಬಲಿಗರು ಹಾಗೂ ರಾಜಕೀಯ ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದ ಕಾವೇರಿ ನಿವಾಸದ ಅಂಗಳದಲ್ಲಿ ಇಂದು ವಿಚಿತ್ರ ಮೌನವೊಂದು ಆವರಿಸಿತ್ತು. ಉಪಹಾರ ಸಭೆಯಲ್ಲಿ ಭಾಗಿಯಾಗಿದ್ದ ಪ್ರಮುಖ ಮಂತ್ರಿಗಳು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ಸುದೀರ್ಘ ಹೋರಾಟದ ಪಯಣವನ್ನು ನೆನೆದು ಕಣ್ಣೀರಿಟ್ಟರು. ಹಲವು ಸಚಿವರ ಕಣ್ಣಾಲಿಗಳು ತೇವಗೊಂಡಿದ್ದವು. ತಾವೇ ಭಾವುಕರಾಗಿದ್ದರೂ ಸಹೋದ್ಯೋಗಿ ಮಂತ್ರಿಗಳ ಬೆನ್ನುತಟ್ಟಿ ಧೈರ್ಯ ತುಂಬಿದ ಸಿದ್ದರಾಮಯ್ಯ, ಮಧ್ಯಾಹ್ನದ ಭೋಜನದ ಬಳಿಕ ರಾಜೀನಾಮೆ ಪತ್ರ ಹಿಡಿದು ನೇರವಾಗಿ ರಾಜಭವನದತ್ತ ಮುಖ ಮಾಡಿದರು.
ರಾಜ್ಯಪಾಲರ ಅನುಪಸ್ಥಿತಿ- ಕಾರ್ಯದರ್ಶಿಗೆ ಪತ್ರ ಹಸ್ತಾಂತರ!
ರಾಜಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಲು ಮುಂದಾದರು. ಆದರೆ, ರಾಜ್ಯಪಾಲರು ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಲ್ಲದ ಕಾರಣ, ಅವರ ಅನುಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು.
ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ಮುಖ್ಯಮಂತ್ರಿಗಳ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ. ಮೂಲಗಳ ಪ್ರಕಾರ ರಾಜ್ಯಪಾಲರು ಇಂದು ರಾತ್ರಿ 7:30ಕ್ಕೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದ್ದು, ಅವರು ಬಂದ ಬಳಿಕವಷ್ಟೇ ರಾಜೀನಾಮೆ ಅಂಗೀಕಾರದ ಔಪಚಾರಿಕ ಹಾಗೂ ಸಾಂವಿಧಾನಿಕ ಪ್ರಕ್ರಿಯೆಗಳು ಸಂಪೂರ್ಣವಾಗಿ ಪೂರ್ಣಗೊಳ್ಳಲಿವೆ.
ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ಅನ್ನರಾಮಯ್ಯ!
ಐದು ದಶಕಗಳ ಸುದೀರ್ಘ ರಾಜಕೀಯ ಚರಿತ್ರೆ ಹೊಂದಿರುವ ಸಿದ್ದರಾಮಯ್ಯ ಅವರು, ಕೊನೆಯ ಕ್ಷಣದವರೆಗೂ ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಸಂಪೂರ್ಣ ಗೌರವ ನೀಡಿ, ಕೊಟ್ಟ ಮಾತಿನಂತೆ ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮೊದಲ ಹಂತ ಯಶಸ್ವಿಯಾಗಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಈಗ ಮತ್ತಷ್ಟು ತೀವ್ರಗೊಂಡಿದೆ.
#FreedomTV #SiddaramaiahResigns #Siddaramaiah #RajBhavanBengaluru #KarnatakaPolitics #GovernorOfKarnataka #KaveriResidence #BreakfastMeeting #PoliticalEnd #CongressHighCommand #RahulGandhi #BreakingNewsKarnataka #PowerShift #ಕನ್ನಡಸುದ್ದಿ #ಸಿದ್ದರಾಮಯ್ಯ_ರಾಜೀನಾಮೆ




