
ಬೆಂಗಳೂರು, : ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಮ್ಮ ಐದು ದಶಕಗಳ ಸುದೀರ್ಘ ರಾಜಕೀಯ ಪಯಣ ಹಾಗೂ ಹಳ್ಳಿಯಿಂದ ಬಂದು ರಾಜ್ಯದ ಅತ್ಯುನ್ನತ ಸಿಎಂ ಗದ್ದುಗೆ ಏರಿದ ದಿನಗಳನ್ನು ನೆನೆದು ಇಡೀ ನಾಡಿನ ಮುಂದೆ ಅತ್ಯಂತ ಭಾವುಕರಾದರು.

ಕೊಟ್ಟ ಮಾತಿನಂತೆ ರಾಜೀನಾಮೆ ನೀಡಿದ್ದೇನೆ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಹೈಕಮಾಂಡ್ ಸೂಚಿಸಿದರೆ ತಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ನಾನು ಮೊದಲೇ ಹೇಳಿದ್ದೆ. ಅದರಂತೆ ಇಂದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಸದ್ಯ ರಾಜ್ಯಪಾಲರು ಊರಿನಲ್ಲಿ ಇಲ್ಲದ ಕಾರಣ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದೇನೆ. ಅವರು ಮರಳಿದ ಬಳಿಕ ಪತ್ರ ಅಂಗೀಕಾರವಾಗುವ ವಿಶ್ವಾಸವಿದೆ” ಎಂದರು. ಇದೇ ವೇಳೆ ಮುಂದಿನ ಸರ್ಕಾರದ ರಚನೆ ಕುರಿತು ಮಾತನಾಡಿದ ಅವರು, “ಮುಂದಿನ ಸಿಎಂ ಆಯ್ಕೆ ಪ್ರಕ್ರಿಯೆ ರಾಜ್ಯಪಾಲರ ಜವಾಬ್ದಾರಿ. ನಮ್ಮ ಬಳಿ 135 ಶಾಸಕರ ಬಲವಿದೆ, ಸಂಪೂರ್ಣ ಬಹುಮತವಿದೆ” ಎಂದು ಸ್ಪಷ್ಟಪಡಿಸಿದರು.
ನನ್ನ ಕುಟುಂಬದಲ್ಲಿ ಯಾರೂ ರಾಜಕಾರಣಿಯಾಗಿರಲಿಲ್ಲ – ತುಂಬಿ ಬಂತು ಕಣ್ಣಾಲಿಗಳು!
ಮಾತು ಮುಂದುವರಿಸುತ್ತಾ ತಮ್ಮ ಹಳೆಯ ದಿನಗಳನ್ನು ನೆನೆದ ಸಿದ್ದರಾಮಯ್ಯ ಅವರ ಕಣ್ಣಾಲಿಗಳು ತುಂಬಿ ಬಂದವು. “ನಾನು ಅತ್ಯಂತ ಸಾಮಾನ್ಯ ಹಳ್ಳಿಯಿಂದ ಬಂದ ವ್ಯಕ್ತಿ. ರೈತನ ಮಗನಾಗಿ, ವಕೀಲನಾಗಿ ಸಾರ್ವಜನಿಕ ಜೀವನಕ್ಕೆ ಬಂದವನು. ನನ್ನ ಕುಟುಂಬದಲ್ಲಿ ಈ ಹಿಂದೆ ಯಾರೊಬ್ಬರೂ ರಾಜಕಾರಣಿಗಳಿರಲಿಲ್ಲ. ಅಂತಹ ನನಗೆ ಈ ನಾಡಿನ ಜನರ ಸೇವೆ ಮಾಡುವ ಮಹಾನ್ ಅವಕಾಶ ಸಿಕ್ಕಿತು. ಸಂವಿಧಾನವೇ ನನ್ನ ಪರಮ ಧ್ಯೇಯ, ಈ ನಾಡಿನ ಮತದಾರರೇ ನನ್ನ ಪಾಲಿನ ದೇವರುಗಳು” ಎಂದು ಗದ್ಗದಿತ ಕಂಠದಿಂದ ನುಡಿದರು.
ಸೋನಿಯಾ, ರಾಹುಲ್ ಹಾಗೂ ಖರ್ಗೆಗೆ ಧನ್ಯವಾದಗಳು!
ತಮಗೆ ಎರಡು ಬಾರಿ ಮುಖ್ಯಮಂತ್ರಿಯಾಗಲು ಮುಕ್ತ ಅವಕಾಶ ನೀಡಿದ ಎಐಸಿಸಿ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದರು. “2006ರಲ್ಲಿ ನಾನು ಕಾಂಗ್ರೆಸ್ ಸೇರಿದ ದಿನದಿಂದ ಹಿಡಿದು ಇಂದಿನವರೆಗೂ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಶಾಸಕರು ನನ್ನ ಮೇಲೆ ಅಪಾರ ಪ್ರೀತಿ ತೋರಿಸಿದ್ದಾರೆ, ಅವರಿಗೆ ನಾನು ಚಿರಋಣಿ. ಹಾಗೆಯೇ 2013 ರಿಂದ 2018 ಹಾಗೂ 2023 ರಿಂದ 2026ರ ವರೆಗೆ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದಗಳು” ಎಂದು ಹೇಳುವ ಮೂಲಕ ತಮ್ಮ ಮುಖ್ಯಮಂತ್ರಿ ಪರ್ವಕ್ಕೆ ಅಧಿಕೃತ ಹಾಗೂ ಭಾವುಕ ವಿದಾಯ ಹೇಳಿದರು.ಸಿದ್ದರಾಮಯ್ಯನವರ ಈ ಭಾವುಕ ವಿದಾಯ ಇಡೀ ಕೃಷ್ಣಾ ಗೃಹ ಕಚೇರಿಯಲ್ಲಿದ್ದವರ ಕಣ್ಣುಗಳನ್ನು ತೇವಗೊಳಿಸಿತು.
#FreedomTV #Siddaramaiah #SiddaramaiahPressMeet #KrishnaHomeOffice #SiddaramaiahEmotional #KarnatakaPolitics #CMResignation #CongressHighCommand #RahulGandhi #SoniaGandhi #MallikarjunKharge #BengaluruNews #BreakingNewsKarnataka #SiddhuSpeech #ಕನ್ನಡಸುದ್ದಿ #ಸಿದ್ದರಾಮಯ್ಯ_ಭಾವುಕ




