ಬಾಗಲಕೋಟೆಯಲ್ಲಿ ಅನ್ನಭಾಗ್ಯ ಅಕ್ಕಿ ದಂಧೆಕೋರರು ಸೆರೆಮನೆಗೆ!
illegal rice smuggle in bagalakote

ಬಾಗಲಕೋಟೆ: ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಕಳ್ಳಮಾರ್ಗದಲ್ಲಿ ಮಾರಾಟ ಮಾಡಲು ಯತ್ನಿಸಿದ ಜಾಲವೊಂದನ್ನು ಸ್ಥಳೀಯರೇ ಬೆನ್ನಟ್ಟಿ ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದ್ದ ಆಹಾರ ಇಲಾಖೆಯ ಅಧಿಕಾರಿ (ಫುಡ್ ಇನ್ಸ್‌ಪೆಕ್ಟರ್), ಎಫ್‌ಐಆರ್ ದಾಖಲಿಸುವಾಗ ಅಕ್ರಮ ನಡೆದ ಸ್ಥಳವನ್ನೇ ಬದಲಿಸಿ ಭಾರಿ ಎಡವಟ್ಟು ಮಾಡಿಕೊಂಡಿರುವುದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಯುವಕನ ಸಮಯಪ್ರಜ್ಞೆಗೆ ಸಿಕ್ಕಿಬಿದ್ದ ಅಕ್ಕಿ ಜಾಲ!
ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ಮಧ್ಯರಾತ್ರಿ ಸುಮಾರು 1:30ರ ಸುಮಾರಿಗೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ KA 29 C 2230 ನಂಬರಿನ ಬೊಲೆರೊ ಪಿಕಪ್ ವಾಹನವೊಂದನ್ನು ಸ್ಥಳೀಯ ಯುವಕ ರಾಜು ನಾಯ್ಕರ್ ಗಮನಿಸಿದ್ದಾರೆ. ತಕ್ಷಣ ಚಾಲಕನನ್ನು ತಡೆದು ಪ್ರಶ್ನಿಸಿದಾಗ ವಾಹನದಲ್ಲಿ ಅಕ್ರಮ ಪಡಿತರ ಅಕ್ಕಿ ಇರುವುದು ಪತ್ತೆಯಾಗಿದೆ. ವಾಹನದಲ್ಲಿ ಬರೋಬ್ಬರಿ 14 ಮೂಟೆಗಳಲ್ಲಿದ್ದ 5 ಕ್ವಿಂಟಲ್‌ಗೂ ಅಧಿಕ ಪಡಿತರ ಅಕ್ಕಿಯನ್ನು ತುಂಬಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ರಾಜು ನಾಯ್ಕರ್ ಪೊಲೀಸರಿಗೆ ಮಾಹಿತಿ ನೀಡಿ, ಮಾಲು ಸಮೇತ ವಾಹನವನ್ನು ಜಪ್ತಿ ಮಾಡಿಸಿ ಕಲಾದಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯಾವಾಗ ಅಕ್ಕಿ ತುಂಬಿದ ವಾಹನ ಪೊಲೀಸ್ ವಶವಾಯಿತೋ, ಇದರಿಂದ ಕಂಗೆಟ್ಟ ದಂದೆಕೋರರು ಮಧ್ಯರಾತ್ರಿ 2:30ರ ಸುಮಾರಿಗೆ ದೂರು ನೀಡಿದ ಯುವಕ ರಾಜು ನಾಯ್ಕರ್ ಮನೆಗೆ ನುಗ್ಗಿದ್ದಾರೆ. ಕೇಸ್ ಹಿಂಪಡೆಯುವಂತೆ ತೀವ್ರ ಒತ್ತಡ ಹೇರಿ, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಗ್ರಾಮದಲ್ಲಿ ದಂದೆಕೋರರ ಆರ್ಭಟ ಜನರಲ್ಲಿ ಆತಂಕ ಮೂಡಿಸಿದೆ.
ಫುಡ್ ಇನ್ಸ್‌ಪೆಕ್ಟರ್ ತಪ್ಪು ಮಾಹಿತಿ- ಅಧಿಕಾರಿಗಳ ಮೇಲೆ ಒತ್ತಡ
ಈ ಇಡೀ ಪ್ರಕರಣದಲ್ಲಿ ಸಾರ್ವಜನಿಕರನ್ನು ಕೆರಳಿಸಿರುವುದು ಫುಡ್ ಇನ್ಸ್‌ಪೆಕ್ಟರ್ ನಡೆ! ಅಕ್ಕಿ ತುಂಬಿದ ವಾಹನ ಸಿಕ್ಕಿಬಿದ್ದಿದ್ದು ತುಳಸಿಗೇರಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ. ಆದರೆ ಆಹಾರ ಇಲಾಖೆಯ ಅಧಿಕಾರಿ ಎಫ್‌ಐಆರ್ ದಾಖಲಿಸುವಾಗ ವಾಹನವು ಕಲಾದಗಿ-ಯಂಡಿಗೇರಿ ರಸ್ತೆಯ ಕೇಶವ ಸಿಮೆಂಟ್ ಕಾರ್ಖಾನೆ ಬಳಿ ಜಪ್ತಿಯಾಗಿದೆ ಎಂದು ಸುಳ್ಳು ಸ್ಥಳವನ್ನು ನಮೂದಿಸಿದ್ದಾರೆ. ಅಧಿಕಾರಿಗಳು ಸ್ಥಳ ಬದಲಿಸಿ ಕೇಸ್ ದಾಖಲಿಸಿದ್ದು ಯಾಕೆ? ದಂದೆಕೋರರನ್ನು ಅಥವಾ ಇದರ ಹಿಂದಿರುವ ಪ್ರಭಾವಿಗಳನ್ನು ಬಚಾವ್ ಮಾಡಲು ದೊಡ್ಡವರ ಒತ್ತಡಕ್ಕೆ ಮಣಿದು ಸ್ಥಳ ಬದಲಾವಣೆ ಮಾಡಲಾಗಿದೆಯೇ? ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ. ಸದ್ಯ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫುಡ್ ಇನ್ಸ್‌ಪೆಕ್ಟರ್ ನಡೆ ತನಿಖೆಯ ದಿಕ್ಕು ತಪ್ಪಿಸುವಂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಅಕ್ರಮದ ಹಿಂದಿರುವ ನಿಜವಾದ ಸೂತ್ರಧಾರಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.
#FreedomTV #BagalkoteNews #RationRiceScam #Tulasigeri #KaladagiPolice #FoodInspectorScam #AnnabhagyaRice #Corruption #CrimeNewsKarnataka #BreakingNews #LocalYouthPower #RajuNaikar #KeshavaCementFactory #ಕನ್ನಡಸುದ್ದಿ #ಬಾಗಲಕೋಟೆ_ಸುದ್ದಿ




