
ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಮಿತಿಮೀರುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಅವಳಿ ನಗರದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದ ಬಿಜೆಪಿ ನಾಯಕರು, “ಪೊಲೀಸ್ ಕಮಿಷನರ್ ಹಠಾವೋ, ಅವಳಿ ನಗರವನ್ನು ಉಳಿಸಿ” ಎಂದು ಧಾರವಾಡದಲ್ಲಿ ಭರ್ಜರಿ ರಣಕಹಳೆ ಮೊಳಗಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಕಮಿಷನರ್ ಶಶಿಕುಮಾರ್ ಸುಟ್ಟೋದ್ರು!
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ನೇತೃತ್ವದಲ್ಲಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ಆಕ್ರೋಶದ ಮುಗಿಲು ಮುಟ್ಟಿಸಿದರು. ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತೀವ್ರ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಭಾವಚಿತ್ರಗಳನ್ನು ರಸ್ತೆಯಲ್ಲೇ ದಹಿಸಿ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಮೀನು ಶೂಟೌಟ್, ಲವ್ ಜಿಹಾದ್, ಮಾಫಿಯಾಗಳ ಅಟ್ಟಹಾಸ!
ಪ್ರತಿಭಟನೆಯ ವೇಳೆ ಬಿಜೆಪಿ ಮುಖಂಡರು ಅವಳಿ ನಗರದಲ್ಲಿ ಇತ್ತೀಚೆಗೆ ನಡೆದ ಸರಣಿ ಅಪರಾಧ ಘಟನೆಗಳನ್ನು ಉಲ್ಲೇಖಿಸಿ ಕಮಿಷನರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.ಧಾರವಾಡದ ತಡಸಿನಕೊಪ್ಪ ಬಳಿ ಹಾಡುಹಗಲೇ ರೌಡಿಶೀಟರ್‌ಗಳಿಂದ ಭೀಕರ ಫೈರಿಂಗ್ ನಡೆದ ಘಟನೆ ಅವಳಿ ನಗರದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ನಗರದಲ್ಲಿ ಹಣವಂತರು ಮತ್ತು ಭೂ ಮಾಫಿಯಾದವರ ಆಟ ಮಿತಿಮೀರಿದ್ದು, ಇದಕ್ಕೆ ಪೊಲೀಸ್ ಕಮಿಷನರ್ ಅವರ ನೇರ ಕುಮ್ಮಕ್ಕಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಅವಳಿ ನಗರದಲ್ಲಿ ಹಿಂದೂಪರ ಸಂಘಟನೆಗಳು ಅನೇಕ ಲವ್ ಜಿಹಾದ್ ಪ್ರಕರಣಗಳನ್ನು ಬೆಳಕಿಗೆ ತಂದಿದ್ದರೂ ಸಹ ಪೊಲೀಸರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇನ್ನು ಮಾಫಿಯಾ ಮಾದಕ ವಸ್ತುಗಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಹೋರಾಟಗಾರರು ಆರೋಪಿಸಿದರು.
ಜಮೀನು ವಿವಾದಗಳ ಹೆಸರಿನಲ್ಲಿ ಅಮಾಯಕ ರೈತರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಅವರ ಮೇಲೆಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಲಾಗುತ್ತಿದೆ. ಇದರ ಜೊತೆಗೆ ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಮೇಲೆಯೂ ಕಾನೂನು ದೌರ್ಜನ್ಯ ನಿರಂತರವಾಗಿ ಸಾಗಿದೆ.
ರಾಜ್ಯಪಾಲರಿಗೆ DC ಮೂಲಕ ಮನವಿ!
ಕಮಿಷನರ್ ನಿರ್ಲಕ್ಷ್ಯ ಹಾಗೂ ಸರ್ಕಾರದ ವೈಫಲ್ಯದಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿ ಓಡಾಡಲು ಹೆದರುವ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ಹೊರಹಾಕಿದ ಬಿಜೆಪಿ ನಿಯೋಗವು, ಈ ಕೂಡಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಖಡಕ್ ಮನವಿ ಪತ್ರ ಸಲ್ಲಿಸಿತು. ಒಂದು ವೇಳೆ ಸರ್ಕಾರ ಮತ್ತು ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಜಿಲ್ಲಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
#FreedomTV #DharwadProtest #BJPProtest #HubliDharwad #LawAndOrder #NShashikumar #SiddaramaiahGovernment #LandMafia #LoveJihad #FarmersDistress #BreakingNews #KannadaNews




