
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರು ಅನೈತಿಕ ಮಾರ್ಗದ ಮೂಲಕ ಲಗ್ಗೆ ಇಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೂಡಲೆ ಹು-ಧಾ ಪೊಲೀಸ್ ಕಮಿಷನರೇಟ್ ವತಿಯಿಂದ ಹೈ ಅಲರ್ಟ್ ಘೋಷಿಸಲಾಗಿದ್ದು, ನಗರದಾದ್ಯಂತ ತಪಾಸಣೆ ತೀವ್ರಗೊಳಿಸಲಾಗಿದೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಇಂದು ನಗರದ ಹೊಸ ಬಸ್ ನಿಲ್ದಾಣ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಾವಿರಾರು ಜನರನ್ನು ತಪಾಸಣೆಗೊಳಪಡಿಸಿ, ಅವರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು.

ಶಾಲಿಮರ್ ಎಕ್ಸ್‌ಪ್ರೆಸ್ ನಲ್ಲಿ ನುಸುಳುಕೋರರು!
ಪಶ್ಚಿಮ ಬಂಗಾಳದಿಂದ ರೈಲು ಮಾರ್ಗದ ಮೂಲಕ ಹುಬ್ಬಳ್ಳಿಗೆ ನೂರಾರು ಕೂಲಿ ಕಾರ್ಮಿಕರು ಆಗಮಿಸಿದ್ದರು.ಶಾಲಿಮರ್ – ವಾಸ್ಕೋಡಗಾಮಾ ಅಮರಾವತಿ ಎಕ್ಸ್‌ಪ್ರೆಸ್ ಟ್ರೈನ್ ಮುಖಾಂತರ ಬಂದಿದ್ದ ಈ ಕಾರ್ಮಿಕರು ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ರಾಜ್ಯದ ಬೇರೆ ಬೇರೆ ಕಡೆಗಳಿಗೆ ಬಸ್‌ಗಳ ಮೂಲಕ ಪ್ರಯಾಣ ಬೆಳೆಸಲು ಸಜ್ಜಾಗಿದ್ದರು.ಈ ವೇಳೆ ಇವರ ನಡೆ-ನುಡಿ ಹಾಗೂ ದಾಖಲೆಗಳ ಮೇಲೆ ತೀವ್ರ ಅನುಮಾನ ಬಂದ ಹಿನ್ನೆಲೆಯಲ್ಲಿ, ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಅಪರಾಧ ವಿಭಾಗದ ಡಿಸಿಪಿ ರವೀಶ್ ಆರ್. ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಶೃತಿ ಅವರು ಖುದ್ದಾಗಿ ಭೇಟಿ ನೀಡಿದರು.ಇಬ್ಬರೂ ಡಿಸಿಪಿಗಳ ಸಮ್ಮುಖದಲ್ಲೇ ಪ್ರತಿಯೊಬ್ಬ ಕಾರ್ಮಿಕನ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಎಲ್ಲಾ ಗುರುತಿನ ಚೀಟಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಲಾಯಿತು.
ನಕಲಿ ಆಧಾರ್ ಕಾರ್ಡ್ – ಅಧಿಕಾರಿಗಳಿಗೆ ತಲೆಸುತ್ತು!
ಪೊಲೀಸರ ಪ್ರಾಥಮಿಕ ತಪಾಸಣೆ ವೇಳೆ ಕೆಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ಹೇಳಲಾಗುತ್ತಿದೆ. ಬಂದವರ ಪೈಕಿ ಕೆಲವು ಜನರ ಕೈಯಲ್ಲಿ ನಕಲಿ ಆಧಾರ್ ಕಾರ್ಡ್‌ಗಳು ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಮುಗಿದಿದ್ದರೂ, ಮತದಾನ ಚಲಾಯಿಸಿರುವ ಬಗ್ಗೆ ಇವರ ಕೈಬೆರಳುಗಳ ಮೇಲೆ ಯಾವುದೇ ಶಾಹಿ ಇಲ್ಲದಿರುವುದು ತೀವ್ರ ಅನುಮಾನಗಳಿಗೆ ಕಾರಣವಾಗಿದೆ.
ಹಿಂದೂ ಸಂಘಟನೆಗಳ ಆಕ್ರೋಶ- ತನಿಖೆಗೆ ಆಗ್ರಹ!
ಹುಬ್ಬಳ್ಳಿಗೆ ಅಕ್ರಮ ಬಾಂಗ್ಲಾ ನುಸುಳುಕೋರರು ಆಗಮಿಸುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಕೃಷಿ ಹಾಗೂ ಇತರೆ ಕೂಲಿ ಕೆಲಸಗಳ ನೆಪದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವ ಶಕ್ತಿಗಳು ನಗರಕ್ಕೆ ಬರುತ್ತಿವೆ ಎಂದು ಆರೋಪಿಸಿದರು. “ಕೇವಲ ಪೊಲೀಸರಷ್ಟೇ ಅಲ್ಲದೆ, ತಹಶೀಲ್ದಾರರ ನೇತೃತ್ವದಲ್ಲಿ ಕಂದಾಯ ಇಲಾಖೆಯ ವಿಶೇಷ ತಂಡವನ್ನು ರಚಿಸಿ ಇವರ ಪೌರತ್ವ ಮತ್ತು ದಾಖಲೆಗಳನ್ನು ಜರಡಿ ಹಿಡಿಯಬೇಕು. ದೇಶದ ಭದ್ರತೆಯ ದೃಷ್ಟಿಯಿಂದ ಕಟ್ಟುನಿಟ್ಟಿನ ತಪಾಸಣೆ ನಡೆಸಿ, ಅಕ್ರಮ ವಲಸಿಗರನ್ನು ತಕ್ಷಣವೇ ಗಡಿಪಾರು ಮಾಡಬೇಕು” ಎಂದು ಹಿಂದೂ ಪರ ಸಂಘಟನೆಗಳು ತೀವ್ರವಾಗಿ ಆಗ್ರಹಿಸಿವೆ.ಸದ್ಯಕ್ಕೆ ಪೊಲೀಸರು ಶಂಕಿತ ಕಾರ್ಮಿಕರ ದಾಖಲೆಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ಮುಂದುವರಿಸಿದ್ದಾರೆ.
#FreedomTV #Hubballi #HubliDharwadPolice #IllegalImmigrants #BangladeshiInfilatrators #PoliceChecking #HubliBusStand #DCPShruthi #DCPRaveesh #SecurityAlert #KarnatakaNews #BreakingNews




