
ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಸಾಂಪ್ರದಾಯಿಕ ಪ್ರಕ್ರಿಯೆಯಡಿ ನಡೆಯಲಿದ್ದು ಅಭ್ಯರ್ಥಿಗಳ ಆಯ್ಕೆಯನ್ನು ಪಕ್ಷದ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಮಾಡಲಿದ್ದಾರೆ. ಸಂಪುಟ ಪುನರ್ರಚನೆಗಾಗಿ ಶಾಸಕರು ಒತ್ತಾಯಿಸುತ್ತಿದ್ಯಾದಾರೆ. ಸಚಿವರಾಗಲು ಕೆಲವರಿಗೆ ಅರ್ಹತೆ ಹಾಗೂ ಸಾಮರ್ಥ್ಯಗಳಿವೆ. ಆದರೆ, ನಿಯಮಾವಳಿಗಳ ಪ್ರಕಾರ ಒಟ್ಟು ಸ್ಥಾನಗಳ ಪೈಕಿ ಕೇವಲ 15% ರಷ್ಟು ಮಾತ್ರ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶವಿದೆ. ಹಿರಿಯ ಸಚಿವರನ್ನು ಕೈಬಿಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ನಾನು ಯಾವುದೇ ಖಾತೆ ಬದಲಾವಣೆಗೆ ಬೇಡಿಕೆ ಇಟ್ಟಿಲ್ಲ. ಹೈಕಮಾಂಡ್ ನನಗೆ ಗೃಹ ಇಲಾಖೆಯ ಜೊತೆಗೆ ಯಾವುದೇ ಹೆಚ್ಚುವರಿ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ.ಮುಖ್ಯಮಂತ್ರಿ ಸ್ಥಾನ ನೀಡಿದರೂ ನಿಭಾಯಿಸಲು ನಾನು ರೆಡಿಯಾಗಿದ್ದೇನೆ.
20 ಸಾವಿರ ಕೋಟಿ ವೆಚ್ಚದಲ್ಲಿ ಮಾದಾವರ – ತುಮಕೂರು ಮೆಟ್ರೋ ಯೋಜನೆ
ತುಮಕೂರು ಭಾಗಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸಬೇಕೆಂಬ ದೀರ್ಘಕಾಲದ ಕನಸು ನನಸಾಗಲಿದೆ.ಕಳೆದ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ, ಹೈದರಾಬಾದ್ ಮೂಲದ ಸಂಸ್ಥೆಗೆ 3.5 ಕೋಟಿ ರೂ. ವೆಚ್ಚ ನೀಡಿ ವರದಿ ಪಡೆಯಲಾಗಿತ್ತು. ಈ ವರದಿಯಲ್ಲಿ ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ ಯೋಜನೆ ಜಾರಿಗೊಳಿಸಲು ಸಾಧ್ಯವಿದೆ ಎಂದು ತಿಳಿಸಲಾಗಿತ್ತು.ಅದರ ಬೆನ್ನಲ್ಲೇ ಬಿಎಂಆರ್‌ಸಿಎಲ್ ವತಿಯಿಂದ ಮತ್ತೊಂದು ಸಂಸ್ಥೆಯ ಮೂಲಕ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲಾಗಿದೆ. ಈ ಯೋಜನೆಯನ್ನು ಪಿಪಿಪಿ (public private partnership) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಡಿಪಿಆರ್‌ನಲ್ಲಿ 20 ಸಾವಿರ ಕೋಟಿ ರೂ. ಅಂದಾಜು ವೆಚ್ಚವನ್ನು ನಿಗದಿಪಡಿಸಲಾಗಿದೆ. ಶೀಘ್ರದಲ್ಲೇ ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂದಿನ ಕ್ರಮವಾಗಿ ಟೆಂಡರ್ ಕರೆಯಲಾಗುವುದು ಎಂದರು.
ನಟ ದರ್ಶನ್ ಆತ್ಮಹತ್ಯೆ ಯತ್ನ!
ನಟ ದರ್ಶನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳ ಕುರಿತು ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. “ಈ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ನಾನು ಪೊಲೀಸ್ ಹಾಗೂ ಜೈಲು ಅಧಿಕಾರಿಗಳಿಂದ ಮೌಖಿಕವಾಗಿ ಮಾಹಿತಿ ಪಡೆದಿದ್ದೇನೆ. ಅಧಿಕಾರಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದೆಲ್ಲಾ ಕೇವಲ ವದಂತಿಯಷ್ಟೇ” ಎಂದು ಅವರು ತಿಳಿಸಿದರು.
ಸಿಜೆಪಿ ಸಭೆಗೆ ಅನುಮತಿ ಇಲ್ಲ!
ನಾಳೆ ಟೌನ್‌ಹಾಲ್ ಬಳಿ ನಡೆಯಬೇಕಿದ್ದ ಸಿಜೆಪಿ ಬಹಿರಂಗ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಯಾವುದೇ ಒಂದು ಸಮಾವೇಶ ಅಥವಾ ಸಭೆ ನಡೆಸುವಾಗ ಅಲ್ಲಿಗೆ ಯಾರೆಲ್ಲಾ ಬರುತ್ತಾರೆ, ಉದ್ದೇಶವೇನು ಎಂಬುದನ್ನು ಪೊಲೀಸರು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಪರಿಶೀಲಿಸುತ್ತಾರೆ. ಪರಿಶೀಲನೆ ನಡೆಸಿ ಅನುಮತಿ ನೀಡುವುದು ಅಥವಾ ಬಿಡುವುದು ಪೊಲೀಸರ ವಿವೇಚನೆಗೆ ಬಿಟ್ಟದ್ದು. ರಾಜಕಾರಣಿಗಳು ತಮ್ಮ ಕೆಲಸ ಮಾಡುತ್ತಾರೆ, ಪೊಲೀಸರು ಕಾನೂನು ಚೌಕಟ್ಟಿನಲ್ಲಿ ರಕ್ಷಣಾ ಕೆಲಸ ಮಾಡುತ್ತಾರೆ.ಇದರಲ್ಲಿ ನನ್ನ ಹಸ್ತಕ್ಷೇಪವಿಲ್ಲ” ಎಂದರು.
ಬಕ್ರೀದ್ ಪ್ರಾಣಿ ವಧೆಗೆ ರಕ್ಷಣೆ!
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಕುರಿ, ಮೇಕೆ, ಹಸು, ಒಂಟೆಗಳನ್ನು ಬಲಿ ನೀಡುವ ಪದ್ಧತಿಗೆ ರಕ್ಷಣೆ ಒದಗಿಸಬೇಕೆಂದು ವಕ್ಫ್ ಬೋರ್ಡ್ ಪತ್ರ ಬರೆದಿರುವ ಕುರಿತು ಮಾತನಾಡಿದ ಸಚಿವರು, “ದೊಡ್ಡ ಹಬ್ಬಗಳು ಬಂದಾಗ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಎಚ್ಚರಿಕೆ ವಹಿಸುವುದು ಎಂದಿನ ಕ್ರಮ. ವಕ್ಫ್ ಬೋರ್ಡ್‌ನವರಿಗೆ ಯಾವ ಆತಂಕವಿದೆಯೋ ಗೊತ್ತಿಲ್ಲ, ಆದರೆ ಅವರ ಪತ್ರಕ್ಕೆ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಸೂಕ್ತವಾಗಿ ಸ್ಪಂದಿಸಲಿದ್ದಾರೆ” ಎಂದರು.
ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್: ಈ ನಿರ್ಧಾರಕ್ಕೆ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, “ವಿರೋಧ ಮಾಡುವುದು ಅವರಿಗೆ ಬಿಟ್ಟ ವಿಚಾರ. ಸಂವಿಧಾನದ ಆಶಯದಂತೆ ಎಲ್ಲರನ್ನೂ ಸರಿಸಮಾನವಾಗಿ ನೋಡುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ. ಹಿಂದುಳಿದವರು, ತುಳಿತಕ್ಕೆ ಒಳಗಾದವರು ಮತ್ತು ನಿರ್ಲಕ್ಷಿತ ವರ್ಗದವರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡುವುದು ಕಾಂಗ್ರೆಸ್ ಪಕ್ಷಕ್ಕೆ ಹೊಸದೇನಲ್ಲ, 1947ರಿಂದಲೂ ನಾವು ಇದನ್ನೇ ಮಾಡಿಕೊಂಡು ಬಂದಿದ್ದೇವೆ” ಎಂದು ಸಮರ್ಥಿಸಿಕೊಂಡರು.
#FreedomTV #GParameshwara #KarnatakaPolitics #NammaMetro #TumakuruMetro #BengaluruNews #DarshanThoogudeepa #CabinetReshuffle #CongressGovernment #KarnatakaNews




