ತೀರ್ಥಹಳ್ಳಿಯಲ್ಲಿ ಮರಳು ಲೂಟಿ-ಪ್ರಭಾವಿಗಳ ಕೃಪಾಕಟಾಕ್ಷ!
Sand smuggle in Shivamogga theerthahalli

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ತೀರ್ಥಹಳ್ಳಿಯಲ್ಲಿ ನೈಸರ್ಗಿಕ ಸಂಪತ್ತು ಮರಳಿನ ಲೂಟಿ ಖುಲ್ಲಂ ಖುಲ್ಲಾ ನಡೆಯುತ್ತಿದೆ. ದಬ್ಬಣಗದ್ದೆ ಮರಳು ಕ್ವಾರಿಯಲ್ಲಿ ಮರಳು ದಂಧೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೋಡಿಯೂ ನೋಡದಂತೆ ಕೂತಿದೆ.ಬೇನಾಮಿ ಹೆಸರಲ್ಲಿ ಗುತ್ತಿಗೆದಾರ ವೇಣುಗೋಪಾಲ್ ಮರಳು ಲೂಟಿ ಮಾಡುತ್ತಿರುವುದು ಸಾಬೀತಾಗಿದೆ.ವಿಪರ್ಯಾಸವೆಂದರೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಜಿಲ್ಲೆಯಲ್ಲಿ ಮರಳುದಂಧೆ ನಡೆಯುತ್ತಿದ್ದು, ಹಿಂದಿರುವ ಪ್ರಭಾವಿಗಳು ಯಾರು ಎಂಬ ಯಕ್ಷಪ್ರಶ್ನೆ ಕಾಡಿದೆ.

ದಬ್ಬಣಗದ್ದೆ ಕ್ವಾರಿಯಲ್ಲಿ ‘ಮರಳು’ ಮಾಫಿಯಾ!
ಮರಳು ದಂಧೆಯಲ್ಲಿ ಅಕ್ರಮ ಎಸಗಿದ ಗುತ್ತಿಗೆದಾರನಿಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ವಿಧಿಸಿದ್ದರೂ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ದಬ್ಬಣಗದ್ದೆ ಮರಳು ಕ್ವಾರಿಯ ಗುತ್ತಿಗೆದಾರ ವೇಣುಗೋಪಾಲ್ ಎಂಬುವವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಇಲ್ಲಿ ನಡೆಯುತ್ತಿರುವುದು ಸಾಮಾನ್ಯ ಅಕ್ರಮವಲ್ಲ, ಕೋಟಿಗಟ್ಟಲೆ ಹಣವನ್ನು ಲೂಟಿಮಾಡಿ ಸರ್ಕಾರಿ ಖಜಾನೆಗೆ ನಷ್ವ್ಯ ಉಂಟು ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ.
ಲೆಕ್ಕದಲ್ಲಿ ಭಾರಿ ಗೋಲ್ ಮಾಲ್
28,000 ಟನ್ ಮರಳಿಗೆ ಪರ್ಮಿಟ್ ಪಡೆದು, ಕೇವಲ 57 ಟನ್ನಿಗೆ ಮಾತ್ರ ಲೆಕ್ಕ ತೋರಿಸಲಾಗಿದೆ! ಇನ್ನುಳಿದ ಸಾವಿರಾರು ಟನ್ ಮರಳಿನ ಲೆಕ್ಕ ಮಂಗಮಾಯವಾಗಿದೆ.ನಿಯಮದ ಪ್ರಕಾರ ಪ್ರತಿ ಲೋಡ್ ಮರಳಿಗೂ ರಾಯಲ್ಟಿ ಸ್ಲಿಪ್ ಇರಬೇಕು. ಆದರೆ, ಇಲ್ಲಿ ದಿನಕ್ಕೆ ನೂರಾರು ಲಾರಿಗಳಲ್ಲಿ ರಾಯಲ್ಟಿ ಸ್ಲಿಪ್ ಇಲ್ಲದೆಯೇ ಮರಳು ಸಾಗಣೆಯಾಗುತ್ತಿದೆ.ಅಕ್ರಮದ ಸಾಕ್ಷ್ಯ ಸಿಗಬಾರದೆಂಬ ಕಾರಣಕ್ಕೆ ಕ್ವಾರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನೇ ನಾಪತ್ತೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಬಿಡ್ಡಿಂಗ್ ದರ ಒಂದು-ಮಾರುಕಟ್ಟೆ ಬೆಲೆ ಮತ್ತೊಂದು!
ಈ ದಂಧೆಯ ಹಿಂದಿರುವ ಅಸಲಿ ಕಿಲಾಡಿತನ ಎಂದರೆ ಬಿಡ್ಡಿಂಗ್ ಮೊತ್ತ. ಪ್ರತಿ ಟನ್ ಮರಳಿಗೆ 4300 ರೂಪಾಯಿ ಬಿಡ್ಡಿಂಗ್ ಕೂಗಿ ಟೆಂಡರ್ ಪಡೆಯಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಟನ್ ಮರಳಿನ ಬೆಲೆಯೇ ಕೇವಲ 1000 ರೂಪಾಯಿ ಇದೆ! ಅಂದರೆ, ಬಿಡ್ಡಿಂಗ್ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಮರಳು ಮಾರಾಟವಾಗುತ್ತಿದ್ದರೂ ಗುತ್ತಿಗೆದಾರ ಲಾಭ ಮಾಡುವುದು ಹೇಗೆ?ರಾಯಲ್ಟಿ ಸ್ಲಿಪ್ ಇಲ್ಲದೆ ದಿನಕ್ಕೆ ನೂರಾರು ಲಾರಿಗಳಲ್ಲಿ ಮರಳು ಸಾಗಣೆ ನಡೆಯುತ್ತಿದ್ದು, ದಿನಕ್ಕೆ ನೂರು ಲಾರಿ ಎಂದರೂ ಹತ್ತಾರು ಕೋಟಿ ಹಣ ಲೂಟಿಯಾಗುತ್ತಿದೆ.
ಆರಗ ಜ್ಞಾನೇಂದ್ರ ಆಕ್ರೋಶ
ಈ ಮರಳು ಲೂಟಿಯ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಕೆಂಡಾಮಂಡಲರಾಗಿದ್ದಾರೆ. ಮರಳು ಲೂಟಿ ಮಾಡುತ್ತಿರುವ ವೇಣುಗೋಪಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಕೂಡಲೇ ಆತನ ಲೈಸೆನ್ಸ್ ರದ್ದುಪಡಿಸಿ, ಆತನ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಎಂದು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
#Shivamogga #Thirthahalli #SandMafia #Corruption #AragaJnanendra #SandScam #KarnatakaNews #FreedomTV #SandLoot #PublicProperty #MiningDepartment #Justice




