Freedom TV

ಅಮೆರಿಕನ್ ಟೆಕ್ ಕ್ಷೇತ್ರಕ್ಕೆ AI ಲಗ್ಗೆ-ಸಾವಿರಾರು ನೌಕರರು ನಿರುದ್ಯೋಗಿಗಳು!

2026ರಲ್ಲಿ 92000 ನೌಕರರಿಗೆ ಗೇಟ್ ಪಾಸ್

ವಾಷಿಂಗ್ಟನ್: ಜಾಗತಿಕ ತಂತ್ರಜ್ಞಾನದ ತವರು ಅಮೆರಿಕದ ಟೆಕ್ ಕಂಪನಿಗಳಲ್ಲಿ ಈಗ ಉದ್ಯೋಗಿಗಳ ಆತಂಕ ಮುಗಿಲು ಮುಟ್ಟಿದೆ. ವರದಿಗಳ ಪ್ರಕಾರ 2026ರಲ್ಲೇ ಸುಮಾರು 92,000 ಟೆಕ್ಕಿಗಳು ಕೆಲಸ ಕಳೆದುಕೊಂಡಿದ್ದಾರೆ.
2020ರಿಂದ ಇಲ್ಲಿತನಕ ಒಟ್ಟು 9,00,000 ಜನರು ಉದ್ಯೋಗದಿಂದ ವಜಾಗೊಂಡಿದ್ದಾರೆ.ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಬ್ಬರ ಶುರುವಾದ ಬೆನ್ನಲ್ಲೇ, ಕಂಪನಿಗಳು ನಡೆಸುತ್ತಿರುವ ಉದ್ಯೋಗ ಕಡಿತ ಪ್ರಕ್ರಿಯೆ ಕೇವಲ ತಾತ್ಕಾಲಿಕ ಮುನ್ನೆಚ್ಚರಿಕೆಯಾಗಿ ಉಳಿದಿಲ್ಲ. ಬದಲಿಗೆ,ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ‘ಶಾಶ್ವತ ರೂಪಾಂತರ’ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಅಂಕಿ-ಅಂಶಗಳ ಭೀತಿ: 9 ಲಕ್ಷ ಮಂದಿ ಮನೆಗೆ! ಕಳೆದ ಕೆಲವು ವರ್ಷಗಳಿಂದ ಟೆಕ್ ವಲಯದಲ್ಲಿ ಸುನಾಮಿಯಂತೆ ಉದ್ಯೋಗ ಕಡಿತ ಆವರಿಸಿದೆ. ಮೆಟಾ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಿಂದಲೇ 20,000 ಮಂದಿ ಹೊರಬಿದ್ದಿದ್ದಾರೆ.ಅಮೆಜಾನ್, ಗೂಗಲ್, ಒರಾಕಲ್ ಮತ್ತು ಸೇಲ್ಸ್‌ಫೋರ್ಸ್‌ನಂತಹ ಕಂಪನಿಗಳೂ ಇದೇ ಹಾದಿ ಹಿಡಿದಿವೆ.

ಮಾನವ ಸಂಪನ್ಮೂಲಕ್ಕಿಂತ ಎಐ ಮೇಲೆಯೇ ಹೂಡಿಕೆ ಹೆಚ್ಚು
ಉದ್ಯೋಗಿಗಳನ್ನು ವಜಾ ಮಾಡಿ ಉಳಿಸುವ ಹಣವನ್ನು ಕಂಪನಿಗಳು ಎಐ ತಂತ್ರಜ್ಞಾನದ ಅಭಿವೃದ್ಧಿಗೆ ಬಳಸುತ್ತಿವೆ. ಆಲ್ಫಬೆಟ್, ಮೈಕ್ರೋಸಾಫ್ಟ್, ಮೆಟಾ ಮತ್ತು ಅಮೆಜಾನ್ ಕಂಪನಿಗಳು 2026ರಲ್ಲಿ ಒಟ್ಟು 66 ಲಕ್ಷ ಕೋಟಿ ರು. ಮೊತ್ತವನ್ನು ಎಐ ಮೇಲೆ ಹೂಡಿಕೆ ಮಾಡುವ ಅಂದಾಜಿದೆ.

ಲಾಭದ ಲೆಕ್ಕಾಚಾರ: ಈ ಹಿಂದೆ 250 ಉದ್ಯೋಗಿಗಳಿಂದ ಬರುತ್ತಿದ್ದ ಲಾಭವನ್ನು ಈಗ ಕೇವಲ 50 ಉದ್ಯೋಗಿಗಳ ಮೂಲಕ ಕಂಪನಿಗಳು ಗಳಿಸುತ್ತಿವೆ. ಒರಾಕಲ್ ಕಂಪನಿಯೊಂದೇ ಉದ್ಯೋಗ ಕಡಿತದಿಂದ ಸುಮಾರು 75-94 ಸಾವಿರ ಕೋಟಿ ರು. ಉಳಿತಾಯ ಮಾಡುತ್ತಿದೆ.ಮೆಟಾ ಕಂಪನಿಯು ಮುಂದಿನ ದಿನಗಳಲ್ಲಿ 8,000 ಉದ್ಯೋಗಗಳನ್ನು ಕಡಿತಗೊಳಿಸುವ ಪ್ಲಾನ್‌ನಲ್ಲಿದೆ ಹಾಗೂ 6,000 ಹೊಸ ಹುದ್ದೆಗಳ ನೇಮಕಾತಿಯನ್ನು ಸ್ಥಗಿತಗೊಳಿಸಿದೆ.

ಕುಸಿಯುತ್ತಿರುವ ಉದ್ಯೋಗಿಗಳ ಆತ್ಮವಿಶ್ವಾಸ
‘ಗ್ಲಾಸ್‌ಡೋರ್ ಎಂಪ್ಲಾಯಿ ಕಾನ್ಫಿಡೆನ್ಸ್‌’ ಸೂಚ್ಯಂಕದ ಪ್ರಕಾರ, ಟೆಕ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಭವಿಷ್ಯದ ಭರವಸೆ ಶೇ. 47.2ಕ್ಕೆ ಕುಸಿದಿದೆ. ಎಐ ತಂತ್ರಜ್ಞಾನವು ತಮ್ಮ ಕೆಲಸವನ್ನು ಕಸಿಯಬಹುದು ಎಂಬ ಭೀತಿಯಿಂದಾಗಿ ಅನೇಕರು ತಾವಾಗಿಯೇ ಕೆಲಸ ತೊರೆಯುತ್ತಿದ್ದಾರೆ.ಕೊರೋನಾ ಸಮಯದಲ್ಲಿ ನಡೆದ ಅತಿಯಾದ ನೇಮಕಾತಿ ಮತ್ತು ಈಗಿನ ಎಐ ಕ್ರಾಂತಿ ಎರಡೂ ಅಂಶಗಳು ಸೇರಿ ಟೆಕ್ ಲೋಕದ ಉದ್ಯೋಗ ಚಿತ್ರಣವನ್ನೇ ಬದಲಿಸುತ್ತಿವೆ.ಇದು ಕೇವಲ ಉದ್ಯೋಗಿಗಳ ಕಡಿತವಲ್ಲ,ಮಾರುಕಟ್ಟೆಯ ಡಿಜಿಟಲ್ ಪುನರ್ರಚನೆ ಎನ್ನುವುದು ಸ್ಪಷ್ಟವಾಗಿದೆ.

#TechLayoffs #ArtificialIntelligence #AIRevolution #USJobMarket #TechNews #FreedomTV #Meta #Microsoft #Google #FutureOfWork #KannadaNews

Comments (0)

Your email address will not be published. Required fields are marked *

Back to top button