ಕ್ರೈಂ ಸ್ಟೋರಿ

300 ಕೋಟಿ ಭೂ ಹಗರಣ-ಅಂದಿನ ಡಿಸಿ ಶಂಕರ್, ಎಸಿ ಮಹೇಶ್ ಬಾಬು ರೂವಾರಿಗಳು!

ಬೆಂಗಳೂರು: ಸಿಲಿಕಾನ್ ಸಿಟಿಯ ಯಲಹಂಕದ ಕೋಟಿ ಹೊಸಹಳ್ಳಿಯಲ್ಲಿ ಬರೋಬ್ಬರಿ 300 ಕೋಟಿ ರೂಪಾಯಿ ಮೌಲ್ಯದ ಭೂ ಹಗರಣವೊಂದು ಬಯಲಿಗೆ ಬಂದಿದ್ದು, ಉನ್ನತ ಮಟ್ಟದ ಅಧಿಕಾರಿಗಳೇ ಈ ಲೂಟಿಯಲ್ಲಿ ಭಾಗಿಯಾಗಿರುವುದು ಸ್ಫೋಟಕ ಟ್ವಿಸ್ಟ್ ನೀಡಿದೆ. ಬಿಡಿಎ (BDA) ಜಮೀನು ಮಾತ್ರವಲ್ಲದೆ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನಿವಾಸವಿರುವ ಜಾಗವನ್ನೇ ಕಬಳಿಸಲು ಸ್ಕೆಚ್ ಹಾಕಿದ ‘ದುಷ್ಟಕೂಟ’ದ ಕರ್ಮಕಾಂಡ ಈಗ ಫ್ರೀಡಂ ಟಿವಿಯಲ್ಲಿ ಬಯಲಾಗಿದೆ.

ಅಧಿಕಾರಿಗಳ ‘ಕೋತಿ’ ಚೇಷ್ಟೆ: ಏನಿದು ಹಗರಣ?
2016ರಲ್ಲಿ ಅಂದಿನ ಬೆಂಗಳೂರು ಜಿಲ್ಲೆ ಡಿಸಿ ಶಂಕರ್ ಮತ್ತು ಉಪವಿಭಾಗಾಧಿಕಾರಿ (AC) ಆಗಿದ್ದ ಮಹೇಶ್‌ ಬಾಬು (ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ) ಹಾಗೂ ಅಂದಿನ ತಹಸೀಲ್ದಾರ್ ಅವರು ಸೇರಿಕೊಂಡು ಈ ಹಗರಣ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 40 ವರ್ಷಗಳ ಹಿಂದೆಯೇ ಲೇಔಟ್ ಆಗಿದ್ದ ಜಾಗಕ್ಕೆ ಅಕ್ರಮವಾಗಿ ‘ಹೊಸ ಸರ್ವೆ ನಂಬರ್’ ಸೃಷ್ಟಿಸಿರುವುದು ಈ ಹಗರಣದ ಅಸಲಿ ಆಟ.

ಸರ್ವೆ ನಂಬರ್ ಬದಲಾವಣೆ: ಸರ್ವೆ ನಂಬರ್ 13/1 ರಲ್ಲಿದ್ದ ಜಾಗಕ್ಕೆ ಅಕ್ರಮವಾಗಿ 13/3 ಎಂದು ಮರುನಾಮಕರಣ ಮಾಡಿ ನಕಲಿ ದಾಖಲೆ ಸೃಷ್ಟಿಸಲಾಗಿದೆ.
ಪಹಣಿ ಮಾಯಾಜಾಲ: ಕಳೆದ 9 ವರ್ಷಗಳಿಂದಲೇ ಎನ್.ಬಲರಾಮ್ ಎಂಬಾತನ ಹೆಸರಿಗೆ ಪಹಣಿ ಬರುವಂತೆ ಅಧಿಕಾರಿಗಳು ಕೈಚಳಕ ತೋರಿದ್ದಾರೆ.ಆನ್‌ಲೈನ್ ಪೋಡಿ ಅಸ್ತ್ರ: ಆನ್‌ಲೈನ್ ಪೋಡಿ ಅಭಿಯಾನದ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿಸಿ, ಅದನ್ನೇ ನೆಪವಾಗಿಟ್ಟುಕೊಂಡು ಬಿಡಿಎಗೆ ಸೇರಬೇಕಾದ ಸಿ.ಎ. (CA) ನಿವೇಶನಗಳನ್ನು ಖಾಸಗಿ ವ್ಯಕ್ತಿಗಳ ಪಾಲಾಗಿಸಲು ಅಧಿಕಾರಿಗಳು ಸಹಕರಿಸಿದ್ದಾರೆ.

ನ್ಯಾಯಮೂರ್ತಿಗಳ ಮನೆಗೂ ಕನ್ನ!
ಈ ಹಗರಣದ ಹಾದಿ ಎಷ್ಟು ಭಯಾನಕವಾಗಿದೆ ಎಂದರೆ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ವಿ. ಗೋಪಾಲಗೌಡರ ನಿವಾಸವಿರುವ ಸಹಕಾರ ನಗರದ ಜಾಗಕ್ಕೂ ನಕಲಿ ದಾಖಲೆ ಸೃಷ್ಟಿಸಲಾಗಿದೆ. ನ್ಯಾಯ ದೇವತೆಯ ಕಣ್ಣಿಗೇ ಮಣ್ಣೆರಚಲು ಮುಂದಾದ ಭೂ ಮಾಫಿಯಾ ಹಾಗೂ ಅಧಿಕಾರಿಗಳ ಜುಗಲ್‌ಬಂದಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಗ್ ಫಿಶ್‌ಗಳಿಗೆ ರಕ್ಷಣೆ? ಕೇವಲ ಕೆಳಹಂತದವರ ಮೇಲೆ FIR!
ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ. ಆದರೆ, ಹಗರಣದ ಅಸಲಿ ಕಿಂಗ್‌ಪಿನ್‌ಗಳಾದ ಅಂದಿನ ಎಸಿ ಮತ್ತು ತಹಸೀಲ್ದಾರ್ ಅವರನ್ನು ಬಿಟ್ಟು, ಕೇವಲ ಒಬ್ಬ ಕೆಳಹಂತದ ಭೂಮಾಪಕನ (Surveyor) ವಿರುದ್ಧ ಮಾತ್ರ ಎಫ್‌ಐಆರ್ ದಾಖಲಿಸಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.

“ಜನರ ಆಸ್ತಿಗೆ ರಕ್ಷಣೆ ಕೊಡಬೇಕಾದವರೇ ಲೂಟಿಗೆ ನಿಂತರೆ ಗತಿಯೇನು? ಬಿಡಿಎ ಆಸ್ತಿಯನ್ನು ಖಾಸಗಿ ವ್ಯಕ್ತಿಯ ಪಾಲಾಗಿಸಿದ ಈ ಮಹಾ ಮೋಸದ ಹಿಂದೆ ಇರುವ ಆ ‘ಅದೃಶ್ಯ ಕೈಗಳು’ ಯಾರದ್ದು?” – ಇದು ಈಗ ಫ್ರೀಡಂ ಟಿವಿ ಎತ್ತುತ್ತಿರುವ ನೇರ ಪ್ರಶ್ನೆ.

ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿರುವ ಮಹೇಶ್‌ ಬಾಬು ಅವರ ಅಂದಿನ ‘ಕಾರ್ಯವೈಖರಿ’ ಈಗ ಅವರ ಕೊರಳಿಗೆ ಉರುಳುವ ಸಾಧ್ಯತೆ ದಟ್ಟವಾಗಿದೆ. ಕಂದಾಯ ಇಲಾಖೆಯು ಅಸಲಿ ಆರೋಪಿಗಳನ್ನು ಕಾಪಾಡುತ್ತಿದೆಯೇ ಅಥವಾ ಅವರಿಗೆ ತಕ್ಕ ಶಿಕ್ಷೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಫ್ರೀಡಂ ಟಿವಿ

#LandScam #BengaluruLandScam #YelahankaScam #FreedomTV #BreakingNews #JusticeForJustice #CorruptionAlert #BDA #RevenueDepartment #MaheshBabuIAS #300CroreScam

Comments (0)

Your email address will not be published. Required fields are marked *

Back to top button