8 ವರ್ಷಗಳ ನಂತರ ‘ದಾಸ’ನ ಮಲ್ಲಿ ಕಮ್‌ಬ್ಯಾಕ್..!

ಬರೋಬ್ಬರಿ ಎಂಟು ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಬಿ. ಸಂಕನಗೌಡರ ಇಂದು ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯಕ್ಷರಾಗುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ಮಲ್ಲಿಕಾರ್ಜುನ ಅವರ ನಾಪತ್ತೆ ಪ್ರಕರಣ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅವರು ಸತ್ತಿರಬಹುದು ಎಂಬ ವದಂತಿಗಳ ನಡುವೆಯೇ ಇಂದು ಎಲ್ಲರ ಮುಂದೆ ಬಂದ ಅವರು, ತಾವು ಇಷ್ಟು ದಿನಗಳ ಕಾಲ ಅನುಭವಿಸಿದ ಕಷ್ಟದ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಅತ್ಯಂತ ಭಾವುಕರಾಗಿ ಮಾತನಾಡಿದ ಮಲ್ಲಿಕಾರ್ಜುನ ಅವರು, ಇಂದು ಪತ್ರಿಕಾಗೋಷ್ಠಿ ನಡೆಸಲು ಕೂಡ ತಮ್ಮ ಬಳಿ ಹಣವಿಲ್ಲದಷ್ಟು ದಯನೀಯ ಸ್ಥಿತಿಯಲ್ಲಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಸಿನಿಮಾ ರಂಗದಲ್ಲಿ ತಮಗೆ ಕೇವಲ ನಷ್ಟವೇ ಉಂಟಾಯಿತು ಹೊರತು ಯಾವುದೇ ಲಾಭವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿನಿಮಾದ ಜೊತೆಗೆ ಆರಂಭಿಸಿದ್ದ ಹೋಟೆಲ್ ಉದ್ಯಮ ಕೂಡ ಕೈ ಹಿಡಿಯದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೆ. ಈ ಎಲ್ಲಾ ವೈಯಕ್ತಿಕ ಸಮಸ್ಯೆಗಳು ಮತ್ತು ವ್ಯವಹಾರದಲ್ಲಿನ ಸತತ ನಷ್ಟದಿಂದಾಗಿ ಬೆಂಗಳೂರನ್ನು ತೊರೆಯಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ನಟ ದರ್ಶನ್ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಿದ ಅವರು, ತೂಗುದೀಪ ಪ್ರೊಡಕ್ಷನ್ ನನ್ನನ್ನು ಸ್ವಂತ ಕುಟುಂಬದಂತೆ ನೋಡಿಕೊಂಡಿದೆ ಎಂದು ಸ್ಮರಿಸಿದ್ದಾರೆ. ದರ್ಶನ್ ಅವರು ತಮಗೆ ಅಣ್ಣನಂತಿದ್ದು, ದಿನಕರ್ ಕೂಡ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಅರ್ಜುನ್ ಸರ್ಜಾ ಸೇರಿದಂತೆ ಹಲವರಿಗೆ ವಂಚಿಸಿದ ಆರೋಪಗಳನ್ನು ಹೊತ್ತಿರುವ ಮಲ್ಲಿಕಾರ್ಜುನ, ಸದ್ಯ ದರ್ಶನ್ ಜೈಲಿನಲ್ಲಿರುವಾಗಲೇ ಹೊರಬಂದಿರುವುದು ಅನೇಕ ಕುತೂಹಲಗಳಿಗೆ ಕಾರಣವಾಗಿದ್ದು, ಕಾನೂನು ಹೋರಾಟ ಮತ್ತು ಮುಂದಿನ ದಿನಗಳಲ್ಲಿ ಎಲ್ಲವನ್ನೂ ಎದುರಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.




