ಸಿನಿಮಾ

8 ವರ್ಷಗಳ ಅಜ್ಞಾತವಾಸದ ನಂತರ ‘ಮಲ್ಲಿ’ ಪ್ರತ್ಯಕ್ಷ

ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ಅವರ ನೆರಳಿನಂತೆ ಇದ್ದ ಮಲ್ಲಿಕಾರ್ಜುನ್ ಬಿ. ಸಂಕನಗೌಡರ ಅಲಿಯಾಸ್ ಮಲ್ಲಿ, ಕೇವಲ ಮ್ಯಾನೇಜರ್ ಆಗಿ ಮಾತ್ರವಲ್ಲದೆ ಚಿತ್ರರಂಗದಲ್ಲಿ ವಿತರಕರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಗದಗ ಮೂಲದ ಇವರು ನಟ ಯಶ್ ಅವರ ‘ಮೊದಲ ಸಲ’ ಅಂತಹ ಸಿನಿಮಾಗಳಿಗೆ ಬಂಡವಾಳ ಹೂಡುವ ಮೂಲಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ತೂಗುದೀಪ ಪ್ರೊಡಕ್ಷನ್ಸ್‌ನ ಬಹುತೇಕ ವ್ಯವಹಾರಗಳನ್ನು ಇವರೇ ನೋಡಿಕೊಳ್ಳುತ್ತಿದ್ದರು. ದರ್ಶನ್ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಇವರು, ಚಿತ್ರರಂಗದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.

ಆದರೆ 2018ರಲ್ಲಿ ಮಲ್ಲಿಕಾರ್ಜುನ್ ದಿಢೀರನೆ ನಾಪತ್ತೆಯಾಗಿದ್ದು ಇಡೀ ಗಾಂಧಿನಗರವನ್ನು ಬೆಚ್ಚಿಬೀಳಿಸಿತ್ತು. ಅವರ ಮೇಲೆ ಸುಮಾರು 11 ಕೋಟಿ ರೂಪಾಯಿಗಳಿಗೂ ಅಧಿಕ ವಂಚನೆಯ ಗಂಭೀರ ಆರೋಪಗಳು ಕೇಳಿಬಂದಿದ್ದವು. ವಿಶೇಷವಾಗಿ ಹಿರಿಯ ನಟ ಅರ್ಜುನ್ ಸರ್ಜಾ ಅವರಿಗೆ ಬರಬೇಕಿದ್ದ ವಿತರಣೆಯ ಹಣವನ್ನು ವಂಚಿಸಿದ್ದಾರೆ ಎಂಬ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ಹಲವು ಸಾಲಗಾರರು ಅವರ ವಿರುದ್ಧ ತಿರುಗಿಬಿದ್ದಿದ್ದರು. ವ್ಯವಹಾರದಲ್ಲಿ ಸತತ ನಷ್ಟ ಅನುಭವಿಸಿದ್ದ ಮಲ್ಲಿಕಾರ್ಜುನ್, ಸಾಲದ ಸುಳಿಗೆ ಸಿಲುಕಿ ಅನಿವಾರ್ಯವಾಗಿ ಬೆಂಗಳೂರನ್ನು ತೊರೆದು ಅಜ್ಞಾತವಾಸಕ್ಕೆ ಹೋಗಿದ್ದರು ಎಂಬುದು ಈಗಿನ ಪತ್ರಿಕಾಗೋಷ್ಠಿಯಲ್ಲಿ ಅವರೇ ಸ್ಪಷ್ಟಪಡಿಸಿದ ಸತ್ಯವಾಗಿದೆ.

ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದಾಗ ಮಲ್ಲಿಕಾರ್ಜುನ್ ಹೆಸರು ಮತ್ತೆ ಮುನ್ನಲೆಗೆ ಬಂದಿತ್ತು. ಮಲ್ಲಿಕಾರ್ಜುನ್ ಅವರನ್ನು ದರ್ಶನ್ ಕೊಲೆ ಮಾಡಿಸಿರಬಹುದು ಅಥವಾ ಅವರ ನಾಪತ್ತೆ ಹಿಂದೆ ದೊಡ್ಡ ಸಂಚಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡಿದ್ದವು. ಈ ಬಗ್ಗೆ ದರ್ಶನ್ ಅವರ ವಿರೋಧಿಗಳು ಮತ್ತು ಸೋಷಿಯಲ್ ಮೀಡಿಯಾದಲ್ಲಿ ತನಿಖೆ ಆಗಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇಂತಹ ಕಠಿಣ ಸಮಯದಲ್ಲಿ ಮಲ್ಲಿಕಾರ್ಜುನ್ ಪ್ರತ್ಯಕ್ಷವಾಗಿರುವುದು ದರ್ಶನ್ ಅವರಿಗೆ ದೊಡ್ಡ ಮಟ್ಟದ ನೆಮ್ಮದಿ ತಂದಿದೆ. ದರ್ಶನ್ ಅವರ ಬಗ್ಗೆ ಮಾತನಾಡಿದ ಮಲ್ಲಿ, “ಅವರು ನನ್ನ ಸ್ವಂತ ಅಣ್ಣನಿದ್ದಂತೆ, ತೂಗುದೀಪ ಕುಟುಂಬ ನನ್ನನ್ನು ಮಗನಂತೆ ನೋಡಿಕೊಂಡಿದೆ” ಎಂದು ಹೇಳುವ ಮೂಲಕ ದರ್ಶನ್ ಮೇಲಿದ್ದ ಕೊಲೆಯ ಸಂಶಯದ ಮೋಡಗಳನ್ನು ಹೋಗಲಾಡಿಸಿದ್ದಾರೆ.

ಇನ್ನು ಮಲ್ಲಿಕಾರ್ಜುನ್ ಮರಳಿ ಬಂದ ವಿಚಾರ ದರ್ಶನ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ. ದರ್ಶನ್ ಅವರ ವಿರುದ್ಧ “ಮಲ್ಲಿಕಾರ್ಜುನನ್ನು ಕೊಲೆ ಮಾಡಿಸಿದ್ದಾರೆ” ಎಂಬ ಅಪಪ್ರಚಾರ ಮಾಡುತ್ತಿದ್ದವರಿಗೆ ಇದು ತಕ್ಕ ಉತ್ತರ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುತ್ತಿದ್ದಾರೆ. “ನಮ್ಮ ಬಾಸ್ ಯಾರಿಗೂ ಅನ್ಯಾಯ ಮಾಡಿಲ್ಲ, ಮಲ್ಲಿ ಬದುಕಿ ಬಂದಿದ್ದೇ ಅದಕ್ಕೆ ಸಾಕ್ಷಿ” ಎಂದು ಡಿ-ಬಾಸ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ದರ್ಶನ್ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಮಲ್ಲಿಕಾರ್ಜುನ್ ಅವರ ಎಂಟ್ರಿ ಮತ್ತು ಅವರ ಹೇಳಿಕೆಗಳು ದರ್ಶನ್ ಪರವಾದ ಹೊಸ ಅಲೆಯನ್ನು ಸೃಷ್ಟಿಸಿವೆ.

Comments (0)

Your email address will not be published. Required fields are marked *

Back to top button