ಶಾಸಕ M.Y.ಪಾಟೀಲ್ ಎದುರು J.M.ಕೊರಬು ಕಣ್ಣೀರು

ಕಲಬುರಗಿ ಜಿಲ್ಲೆಯ ಅಫಜಲಪುರ ರಾಜಕೀಯದಲ್ಲಿ ಈಗ ಶಾಸಕ ಎಂ.ವೈ. ಪಾಟೀಲ್ ಅವರ ಪುತ್ರ, ಅರುಣ್ ಕುಮಾರ್ ಪಾಟೀಲ್ ಅವರ ಹಸ್ತಕ್ಷೇಪದ ವಿವಾದ ಭಾರಿ ಸಂಚಲನ ಮೂಡಿಸಿದೆ. ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾಗಿದ್ದ ಜೆ.ಎಂ. ಕೊರಬು ಅವರು ಸ್ವತಃ ಶಾಸಕರ ಎದುರೇ ಕಣ್ಣೀರು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದು ಚರ್ಚೆಗೆ ಗ್ರಾಸವಾಗಿದೆ. ನೀವು ಶಾಸಕರಾಗಲು ನಾವು ಹಗಲು ರಾತ್ರಿ ಶ್ರಮಿಸಿದ್ದೇವೆ, ಆದರೆ ನಿಮ್ಮ ಮಗನ ಸರ್ವಾಧಿಕಾರ ಹಾಗೂ ಕೆಲಸಗಳಲ್ಲಿನ ಹಸ್ತಕ್ಷೇಪದಿಂದ ನಮಗೆ ಬೇಸರವಾಗಿದೆ ಎಂದು ಕೊರಬು ಅವರು ನೋವು ತೋಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಕೂಡ ಅರುಣ್ ಕುಮಾರ್ ವಿರುದ್ಧ ತೀವ್ರವಾಗಿ ಗುಡುಗಿದ್ದು, ಶಾಸಕರ ಪುತ್ರನ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಗಂಭೀರ ಆರೋಪಗಳಿಗೆ ಸಂಬಂಧಿಸಿದಂತೆ ಅರುಣ್ ಕುಮಾರ್ ಈಗ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದಾರೆ. ನಮ್ಮ ತಂದೆ ಎಂ.ವೈ. ಪಾಟೀಲ್ ಅವರು ಕ್ಷೇತ್ರದ ಶಾಸಕರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಯಾವುದೇ ಅಧಿಕೃತ ಕೆಲಸಗಳಲ್ಲಿ ನಾನು ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೆ.ಎಂ. ಕೊರಬು ಹಾಗೂ ಮಾಲೀಕಯ್ಯ ಗುತ್ತೇದಾರ್ ಇಬ್ಬರೂ ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದು, ಅನಗತ್ಯವಾಗಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅರುಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾನು ಯಾವ ರೀತಿ ಇದ್ದೀನಿ ಎಂಬುದು ಪಕ್ಷದ ಹಿರಿಯ ನಾಯಕರಿಗೆ ಮತ್ತು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಕಲಬುರಗಿಯಲ್ಲಿ ಅರುಣ್ ಕುಮಾರ್ ಹೇಳಿದ್ದಾರೆ. ಶಾಸಕರ ಪುತ್ರನ ಅತಿಯಾದ ಹಸ್ತಕ್ಷೇಪದಿಂದ ಬೇಸತ್ತಿದ್ದ ಜೆ.ಎಂ. ಕೊರಬು ಅವರನ್ನು ಸ್ವತಃ ಶಾಸಕ ಎಂ.ವೈ. ಪಾಟೀಲ್ ಅವರು ಈ ಹಿಂದೆ ಸಮಾಧಾನ ಪಡಿಸಿದ್ದರು. ಆದರೆ ಈಗ ಶಾಸಕರ ಪುತ್ರನೇ ನೇರವಾಗಿ ಮೈದಾನಕ್ಕಿಳಿದು ಸ್ಪಷ್ಟನೆ ನೀಡಿರುವುದರಿಂದ, ಅಫಜಲಪುರ ಕಾಂಗ್ರೆಸ್‌ನಲ್ಲಿನ ಈ ಅಸಮಾಧಾನ ಸದ್ಯಕ್ಕೆ ಶಮನವಾಗುತ್ತದೆಯೇ ಅಥವಾ ಮತ್ತಷ್ಟು ವಿವಾದಕ್ಕೆ ಕಾರಣವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.




