ರಾಜಕೀಯ

ದೆಹಲಿಯಲ್ಲಿ ‘ಕೈ’ ಶಾಸಕರ ಲಾಬಿ.. ವರಿಷ್ಠರ ಭೇಟಿ!

ದೆಹಲಿಯ ರಾಜಕೀಯ ಅಂಗಳದಲ್ಲಿ ಈಗ ಕಾಂಗ್ರೆಸ್ ಶಾಸಕರ ಭರಾಟೆ ಜೋರಾಗಿದ್ದು, ಹೈಕಮಾಂಡ್ ನಾಯಕರಿಗೆ ಹೊಸ ತಲೆನೋವು ಶುರುವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ತಮ್ಮ ಹಠ ಬಿಡದೆ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ವರಿಷ್ಠರಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರ ಭೇಟಿಗೆ ಅಂತಿಮವಾಗಿ ಮುಹೂರ್ತ ಫಿಕ್ಸ್ ಆಗಿದೆ. ಇಂದು ಮಧ್ಯಾಹ್ನ ಅಥವಾ ಸಂಜೆ ಈ ಮಹತ್ವದ ಸಭೆ ನಡೆಯಲಿದ್ದು, ಶಾಸಕರ ಪಟ್ಟು ಮತ್ತು ಹಠಮಾರಿತನಕ್ಕೆ ಸುಸ್ತಾಗಿರುವ ಹೈಕಮಾಂಡ್, ಕೊನೆಗೂ ಅವರನ್ನು ಕರೆಸಿ ಮನವೊಲಿಸಲು ನಿರ್ಧರಿಸಿದೆ.

ಈ ಭೇಟಿಯ ವೇಳೆ ಶಾಸಕರು ಕೇವಲ ಅಹವಾಲು ಸಲ್ಲಿಸುವುದಷ್ಟೇ ಅಲ್ಲದೆ, ಸಚಿವ ಸಂಪುಟವನ್ನು ತಕ್ಷಣವೇ ಪುನಾರಚನೆ ಮಾಡಬೇಕೆಂದು ನೇರವಾಗಿಯೇ ಒತ್ತಾಯಿಸಲಿದ್ದಾರೆ. ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ಮತ್ತು ಆಡಳಿತದಲ್ಲಿನ ಗೊಂದಲಗಳ ಬಗ್ಗೆ ಹಿರಿಯ ನಾಯಕರ ಮುಂದೆ ಸುದೀರ್ಘ ಚರ್ಚೆ ನಡೆಸಲು ಶಾಸಕರ ತಂಡ ಸಜ್ಜಾಗಿದೆ. ಈ ನಿರ್ಣಾಯಕ ಮಾತುಕತೆಗಳ ನಂತರ, ಸಂಜೆಯೇ ಶಾಸಕರು ಬೆಂಗಳೂರಿಗೆ ವಿಮಾನದ ಮೂಲಕ ವಾಪಸ್ ಆಗಲಿದ್ದು, ದೆಹಲಿಯ ಈ ಸಭೆ ರಾಜ್ಯ ಸರ್ಕಾರದಲ್ಲಿ ಯಾವ ಬದಲಾವಣೆ ತರಲಿದೆ ಎಂಬ ಕುತೂಹಲ ಮೂಡಿಸಿದೆ.

ಇತ್ತ ದಾವಣಗೆರೆಯ ರಾಜಕೀಯ ಕಿಚ್ಚು ಮತ್ತು ಅತ್ತ ಶಾಸಕರ ಮಂತ್ರಿಗಿರಿಯ ಹಪಾಹಪಿ ಕಾಂಗ್ರೆಸ್ ಪಾರ್ಟಿಗೆ ದೊಡ್ಡ ಮಟ್ಟದ ಡ್ಯಾಮೇಜ್ ಉಂಟುಮಾಡುತ್ತಿದೆ. ಸತತವಾಗಿ ಉಂಟಾಗುತ್ತಿರುವ ಈ ಹಾನಿಯನ್ನು ನಿಯಂತ್ರಿಸಲು ಮತ್ತು ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳಲು ದೆಹಲಿ ನಾಯಕರು ಈಗ ಹರಸಾಹಸ ಪಡುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಮುಜುಗರ ತರುತ್ತಿರುವ ಶಾಸಕರ ಲಾಬಿಯನ್ನು ಶಮನಗೊಳಿಸಿ, ಎಲ್ಲವನ್ನೂ ನಿಯಂತ್ರಣಕ್ಕೆ ತರುವುದೇ ಈಗ ಹೈಕಮಾಂಡ್ ಮುಂದಿರುವ ಅತಿದೊಡ್ಡ ಸವಾಲಾಗಿದೆ.

Comments (0)

Your email address will not be published. Required fields are marked *

Back to top button