RAICHURಕ್ರೈಂ ಸ್ಟೋರಿಸುದ್ದಿ

ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕಾ ಬಲೆಗೆ

ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಅವರು ಇ-ಖಾತೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಈ ಕಾರ್ಯಾಚರಣೆ ಅತ್ಯಂತ ಸಿನಿಮೀಯವಾಗಿ ನಡೆದಿದೆ. ರಾಘವೇಂದ್ರ ರೆಡ್ಡಿ ಎಂಬುವವರಿಂದ ಕೆಲಸ ಮಾಡಿಕೊಡಲು ಒಟ್ಟು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ, ಅದರ ಮೊದಲ ಕಂತಾಗಿ 1 ಲಕ್ಷ ರೂ. ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತರ ತಂಡ ಆಗಮಿಸುತ್ತಿದ್ದಂತೆಯೇ ಗಾಬರಿಗೊಂಡ ಸುರೇಶ್ ಶೆಟ್ಟಿ, ಹಣದೊಂದಿಗೆ ಎಸ್ಕೇಪ್ ಆಗಲು ಯತ್ನಿಸಿ ಸಿರವಾರದಿಂದ ಕವಿತಾಳ ಪಟ್ಟಣದ ಕಡೆಗೆ ತಮ್ಮ ಕಾರಿನಲ್ಲಿ ವೇಗವಾಗಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ.

ಆದರೆ ಲೋಕಾಯುಕ್ತ ಅಧಿಕಾರಿಗಳು ಕೂಡ ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಅಧಿಕಾರಿಯ ಕಾರನ್ನು ಚೇಸ್ ಮಾಡಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಸದ್ಯ ಸಿಕ್ಕಿಬಿದ್ದಿರುವ ಭ್ರಷ್ಟ ಅಧಿಕಾರಿಯನ್ನು ಕವಿತಾಳದ ಪ್ರವಾಸಿ ಮಂದಿರಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದ್ದು, ಪಂಚನಾಮೆ ಪ್ರಕ್ರಿಯೆಗಳು ಮುಂದುವರಿದಿವೆ. ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments (0)

Your email address will not be published. Required fields are marked *

Back to top button