ಕ್ರೈಂ ಸ್ಟೋರಿಸುದ್ದಿ

ತಾಯಿಯ ಸಾವಿಗೆ ಸೇಡು; ಗರ್ಭಿಣಿ ಟೆಕ್ಕಿಯನ್ನು ಚಾಕುವಿನಿಂದ ಇರಿದು ಕೊಂದ ಮಾಜಿ ಪತಿ

ಹೈದರಾಬಾದ್‌: ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಮೃತ ಮಹಿಳೆ ಮೂರು ತಿಂಗಳ ಗರ್ಭಿಣಿಯಾಗಿದ್ದರು ಎಂದು ಆಕೆಯ ಎರಡನೇ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

29 ವರ್ಷದ ಈ ಮಹಿಳೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.ಕೊಲೆ ಆರೋಪಿಯು 2022ರಲ್ಲಿ ಈ ಮಹಿಳೆಯನ್ನು ವಿವಾಹವಾಗಿದ್ದನು. ಮದುವೆಯ ನಂತರ ದಂಪತಿಗಳು ಕೆನಡಾದಲ್ಲಿ ನೆಲೆಸಿದ್ದರು. ಆದರೆ, ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣ ಮಹಿಳೆಯು ಭಾರತಕ್ಕೆ ವಾಪಸ್ ಬಂದು ಪತಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಿಸಿದ್ದರು. 2024ರಲ್ಲಿ ಇಬ್ಬರಿಗೂ ಕಾನೂನುಬದ್ಧವಾಗಿ ವಿಚ್ಛೇದನ ದೊರೆತಿತ್ತು. ತದನಂತರ 2025ರ ಏಪ್ರಿಲ್‌ನಲ್ಲಿ ಮಹಿಳೆ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಿ ಹೊಸ ಜೀವನ ಆರಂಭಿಸಿದ್ದರು.

ಆರೋಪಿಯು 2025ರ ಮಾರ್ಚ್‌ನಲ್ಲಿ ತನ್ನ ತಾಯಿಯ ನಿಧನದ ನಂತರ ಭಾರತಕ್ಕೆ ಮರಳಿದ್ದನು. ಆದರೆ, ಆತನ ವಿರುದ್ಧ ದಾಖಲಾಗಿದ್ದ ಕೌಟುಂಬಿಕ ಹಿಂಸಾಚಾರದ ಪ್ರಕರಣದಿಂದಾಗಿ ಲುಕ್-ಔಟ್ ನೋಟಿಸ್ ಜಾರಿಯಾಗಿತ್ತು ಮತ್ತು ಪಾಸ್‌ಪೋರ್ಟ್ ಅಮಾನತುಗೊಂಡಿತ್ತು. ಇದರಿಂದಾಗಿ ಆತನಿಗೆ ಕೆನಡಾಕ್ಕೆ ಮರಳಲು ಸಾಧ್ಯವಾಗದೆ ನಿರುದ್ಯೋಗಿಯಾಗಿದ್ದನು. ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ ಆತ, ತನ್ನ ಜೀವನದ ಈ ಸ್ಥಿತಿಗೆ ಮತ್ತು ತಾಯಿಯ ಸಾವಿಗೆ ಮಾಜಿ ಪತ್ನಿಯೇ ಕಾರಣ ಎಂಬ ದ್ವೇಷ ಬೆಳೆಸಿಕೊಂಡಿದ್ದನು.

ತಾನು ಮತ್ತು ತನ್ನ ಕುಟುಂಬ ಅನುಭವಿಸಿದ ಮಾನಸಿಕ ನೋವಿಗೆ ಮಾಜಿ ಪತ್ನಿಯೇ ಹೊಣೆ ಎಂದು ಭಾವಿಸಿದ ಆರೋಪಿ, ಈ ದ್ವೇಷದ ಹಿನ್ನೆಲೆಯಲ್ಲಿ ಆಕೆಯ ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Comments (0)

Your email address will not be published. Required fields are marked *

Back to top button