#Exclusive NewsTop News

IND vs AUS: ಏನಿದು ಪಿಂಕ್ ಬಾಲ್ ಟೆಸ್ಟ್?

 

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಶುರುವಾಗಲಿದೆ. ಅಡಿಲೇಡ್​​ನ ಓವಲ್​​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಪಿಂಕ್ ಬಾಲ್ ಟೆಸ್ಟ್ ಎಂಬುದು ವಿಶೇಷ.


ವರ್ಷಗಳ ಬಳಿಕ ಮತ್ತೊಂದು ಪಿಂಕ್ ಬಾಲ್ ಟೆಸ್ಟ್​​ಗೆ ವೇದಿಕೆ ಸಿದ್ಧವಾಗಿದೆ. ಈ ಬಾರಿ ಕೂಡ ಆತಿಥ್ಯವಹಿಸುತ್ತಿರುವುದು ಆಸ್ಟ್ರೇಲಿಯಾ ಅಡಿಲೇಡ್​​ನ ಓವಲ್ ಮೈದಾನ. ಡಿಸೆಂಬರ್ 6 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಈ ಮುಖಾಮುಖಿಯೇ ಈಗ ಪಿಂಕ್ ಬಾಲ್ ಟೆಸ್ಟ್​​​ನ ಕಾವೇರಿಸಿದೆ. ಇದರ ನಡುವೆ ಏನಿದು ಪಿಂಕ್ ಬಾಲ್ ಟೆಸ್ಟ್ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರುತ್ತದೆ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

 

ಏನಿದು ಪಿಂಕ್ ಬಾಲ್ ಟೆಸ್ಟ್?

  • ಪಿಂಕ್ ಬಾಲ್ ಟೆಸ್ಟ್ ಎಂದರೆ ಡೇ-ನೈಟ್ ಟೆಸ್ಟ್ ಪಂದ್ಯ. ಹೊನಲು ಬೆಳಕಿನಲ್ಲಿ ಆಡಲಾಗುವ ಈ ಪಂದ್ಯದಲ್ಲಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. ಹೀಗಾಗಿಯೇ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಪಿಂಕ್ ಬಾಲ್ ಟೆಸ್ಟ್ ಎಂದು ಕರೆಯಲಾಗುತ್ತಿದೆ.

ಪಿಂಕ್ ಬಾಲ್ ಅನ್ನು ಯಾಕಾಗಿ ಬಳಸಲಾಗುತ್ತದೆ?

  • ಸಾಮಾನ್ಯವಾಗಿ ಕ್ರಿಕೆಟ್​​ನಲ್ಲಿ ರೆಡ್ ಮತ್ತು ವೈಟ್ ಬಾಲ್​ ಅನ್ನು ಬಳಸಲಾಗುತ್ತದೆ. ಆದರೆ ಡೇ-ನೈಟ್ ಟೆಸ್ಟ್​ ಪಂದ್ಯವನ್ನು ಪಿಂಕ್ ಬಾಲ್​ನಲ್ಲಿ ಆಡಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾತ್ರಿಯ ವೇಳೆ ಚೆಂಡಿನ ಸ್ಪಷ್ಟ ಗೋಚರತೆ. ಈ ಹಿಂದೆ ಡೇ-ನೈಟ್ ಟೆಸ್ಟ್​ ಪಂದ್ಯಕ್ಕಾಗಿ ಯೆಲ್ಲೊ, ಪಿಂಕ್ ಮತ್ತು ಗಾಢ ಬಿಳಿ ಬಣ್ಣದ ಚೆಂಡಿನ ಪ್ರಯೋಗಗಳನ್ನು ನಡೆಸಲಾಗಿತ್ತು. ಈ ಪ್ರಯೋಗದ ವೇಳೆ ಪಿಂಕ್ ಬಾಲ್ ಗೋಚರತೆಯು ಹೆಚ್ಚಿನ ಸ್ಪಷ್ಟತೆಯಿಂದ ಕೂಡಿದೆ ಎಂದು ಬ್ಯಾಟರ್​​ಗಳು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಡೇ-ನೈಟ್ ಟೆಸ್ಟ್​​ನಲ್ಲಿ ಪಿಂಕ್ ಬಾಲ್ ಬಳಸಲು ನಿರ್ಧರಿಸಲಾಯಿತು.

ಮೊದಲ ಬಾರಿಗೆ ಪಿಂಕ್ ಬಾಲ್ ಪಂದ್ಯ ನಡೆದಿದ್ದು ಯಾವಾಗ?

  • 2009 ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ಏಕದಿನ ಪಂದ್ಯದಲ್ಲಿ ಪಿಂಕ್ ಚೆಂಡನ್ನು ಬಳಸಲಾಯಿತು. ಈ ಪ್ರಯೋಗವು ಯಶಸ್ವಿಯಾಗಿದ್ದರಿಂದ ನಸುಗೆಂಪಿನ ಬಣ್ಣದ ಚೆಂಡಿಗೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದ್ದರು.

ಮೊದಲ ಡೇ-ನೈಟ್ ಟೆಸ್ಟ್ ನಡೆದಿದ್ದು ಯಾವಾಗ?

  • ಡೇ-ನೈಟ್ ಟೆಸ್ಟ್​​ನ ಪರಿಕಲ್ಪನೆಯು 2000 ರಲ್ಲೇ ಮೂಡಿಬಂದರೂ ಅದು ಅಧಿಕೃತವಾಗಿ ಜಾರಿಗೆ ಬಂದಿದ್ದು ಹದಿನೈದು ವರ್ಷಗಳ ಬಳಿಕ ಎಂಬುದು ವಿಶೇಷ. 2015 ರಲ್ಲಿ ಅಡಿಲೇಡ್​​ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಪಿಂಕ್ ಬಾಲ್ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು.

ಭಾರತದಲ್ಲಿ ಪಿಂಕ್ ಪ್ರಯೋಗ ನಡೆದಿದ್ದು ಯಾವಾಗ?

  • 2016ರ ದುಲೀಪ್ ಟ್ರೋಫಿಯಲ್ಲಿ ಪಿಂಕ್ ಬಾಲ್ ಅನ್ನು ಪ್ರಯೋಗಿಸಲಾಯಿತು. ಈ ವೇಳೆ ಮಿಶ್ರ ವಿಮರ್ಶೆಗಳನ್ನು ಪಡೆದಿದ್ದರಿಂದ ಬಿಸಿಸಿಐ ಯಾವುದೇ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಮುಂದಾಗಿರಲಿಲ್ಲ.

ಟೀಮ್ ಇಂಡಿಯಾ ಮೊದಲ ಪಿಂಕ್ ಬಾಲ್ ಟೆಸ್ಟ್ ಆಡಿದ್ದು ಯಾವಾಗ?

  • 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಸೌರವ್ ಗಂಗೂಲಿ ಪಿಂಕ್ ಬಾಲ್ ಬಳಕೆಯ ಬಗ್ಗೆ ಒಲವು ವ್ಯಕ್ತಪಡಿಸಿದರು. ಅಲ್ಲದೆ ಅದೇ ವರ್ಷ ನಡೆದ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಡೇ-ನೈಟ್ ಟೆಸ್ಟ್ ಅನ್ನು ಆಯೋಜಿಸಲಾಯಿತು. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದ್ದರು.

ಈವರೆಗೆ ಎಷ್ಟು ಪಿಂಕ್ ಬಾಲ್ ಟೆಸ್ಟ್ ನಡೆದಿದೆ?

  • ಇದುವರೆಗೆ 22 ಡೇ-ನೈಟ್ ಟೆಸ್ಟ್ ಪಂದ್ಯಗಳು ನಡೆದಿದೆ. ಈ ಎಲ್ಲಾ ಪಂದ್ಯಗಳಲ್ಲೂ ಫಲಿತಾಂಶ ಮೂಡಿಬಂದಿರುವುದು ವಿಶೇಷ. ಅಂದರೆ ಈವರೆಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ಕಂಡಿಲ್ಲ.

ಅತ್ಯಧಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡಿದ ತಂಡ ಯಾವುದು?

  • ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನದಲ್ಲಿದೆ. ಆಸೀಸ್ ಪಡೆಯು ಇದುವರೆಗೆ 10 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನಾಡಿದೆ. ಇನ್ನು ಟೀಮ್ ಇಂಡಿಯಾ 4 ಡೇ-ನೈಟ್ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದೆ.

ಭಾರತ ತಂಡ ಎಷ್ಟು ಪಂದ್ಯ ಗೆದ್ದಿದೆ?

  • ಟೀಮ್ ಇಂಡಿಯಾ ಈವರೆಗೆ 4 ಪಿಂಕ್ ಬಾಲ್ ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಸೋತಿರುವುದು ಆಸ್ಟ್ರೇಲಿಯಾ ವಿರುದ್ಧ ಮಾತ್ರ.

Comments (0)

Your email address will not be published. Required fields are marked *

Back to top button