#Exclusive News

371-J ನೇಮಕಾತಿ ಪ್ರಕ್ರಿಯೆಗೆ ತಡೆ ಕೋರಿದ್ದ ಕಾನೂನು ಮಂತ್ರಿ; ಹಳೇ ಪತ್ರ ವೈರಲ್

371(ಜೆ) ಅನ್ವಯ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೆ ತಡೆಕೋರಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೆಪಿಎಸ್​ಸಿ, ಕೆಇಎ, ಸಿಎಸಿ ಮೂಲಕ ನಡೆಯುತ್ತಿರುವ ನಾನಾ ಇಲಾಖೆಗಳ  GPSTR, ASSISTANT PROFESSOR, RDWS,KPTCI ಸೇರಿವಿವಿಧ ಹುದ್ದೆಗಳ ನೇಮಕಾತಿಯಲ್ಲಿ 371(ಜೆ) ಅನ್ವಯ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ನಿಯಮಗಳಿಗೆ ಸಂಬಂಧಿಸಿದಂತೆ 2023ರ ಫೆಬ್ರವರಿ 1ರಂದು ಹೊರಡಿಸಿರುವ ಸುತ್ತೋಲೆಯನ್ನು ಪೂರ್ವಾನ್ವಯ ಮಾಡಲಾಗಿದೆ.

ಇದರಿಂದ ಹೈದ್ರಾಬಾದ್ ಕರ್ನಾಟಕ ಹೊರತಾದ 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ.. ಇದನ್ನು ಸರಿಪಡಿಸಿ ಎಂದು ಅಭ್ಯರ್ಥಿಗಳು ಕಾನೂನು ಮಂತ್ರಿಗೆ ಮನವಿ ಮಾಡಿದ್ದಾರೆ. ಇದನ್ನು ಪರಿಗಣಿಸಿದ ಕಾನೂನು ಸಚಿವರು, ಮುಖ್ಯಮಂತ್ರಿಗೆ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

371(ಜೆ) ವಿಶೇಷ ಮೀಸಲಾತಿ ಸುತ್ತೋಲೆ ರಾಜ್ಯಪಾಲರು ಹೊರಡಿಸಿರುವ ಮೂಲ ಗೆಜೆಟ್ ಕಾಯ್ದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ.ಅಲ್ಲದೇ,ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಜಾರಿಗೊಳಿಸುವುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಸ್ಥಳೀಯ ನೇಮಕಾತಿಗಳ ವಿಚಾರವಾಗಿ ಕೆಎಟಿ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮೇಲ್ಮನವಿ ಹೋಗಿದೆ.

ಇಲಾಖಾ ಹಂತದಲ್ಲಿಯೇ ಕೆಎಟಿ ಆದೇಶ ಮತ್ತು  ಸಾರ್ವಜನಿಕರಿಂದ ಬಂದಿರುವ ಆರೋಫ/ದೂರುಗಳ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕು. 24 ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ರಾಜ್ಯಪಾಲರ ಆದೇಶ, ಕೆಎಟಿ ನೀಡಿರುವ ಆದೇಶಗಳ ಬಗ್ಗೆ ಸಮಿತಿ ರಚನೆ ಮಾಡಿ ವರದಿ ತಯಾರಿಸದ ನಂತರ ಮೂಲ ಗೆಜೆಟ್ ನಿಯಮಗಳ ನಿರ್ದೇಶನದಂತೆ ನೇಮಕಾತಿಗಳಲ್ಲಿ 371(ಜೆ) ಮೀಸಲಾತಿ ನಿಯಮಗಳನ್ನು ಅನುಷ್ಠಾನ ಮಾಡಬೇಕು. ಸಮಿತಿ ವರದಿ ನೀಡುವವರೆಗೆ ನೇಮಕಾತಿ ಪ್ರಕ್ರಿಯೆ ಮುಂದುವರೆಸದಂತೆ ನೇಮಕಾತಿ ಪ್ರಾಧಿಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು 24 ಜಿಲ್ಲೆಗಳ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.

ಹೀಗಾಗಿ, ಈ ಮನವಿಯನ್ನು ಪರಿಗಣಿಸಿ ಹೈದ್ರಾಬಾದ್ ಕರ್ನಾಟಕೇತರ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜನವರಿ 22ರಂದು ಮುಖ್ಯಮಂತ್ರಿಗಳನ್ನು ಕಾನೂನು ಸಚಿವರು ಕೋರಿದ್ದಾರೆ.ಆದರೆ, ಮುಖ್ಯಮಂತ್ರಿಗಳು ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾನೂನು ಸಚಿವರ ಹಳೆಯ ಪತ್ರವೀಗ ವಿರೋಧ ಪಕ್ಷಗಳಿಗೆ ಅಸ್ತ್ರವಾಗುವಂತೆ ಕಾಣುತ್ತಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಈ ಪತ್ರ ಉಲ್ಲೇಖಿಸಿ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬರತೊಡಗಿವೆ. ಇದು ಮೀಸಲಾತಿ ಕಸಿಯುವ ಹುನ್ನಾರ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ರಾಯಚೂರಿನಲ್ಲಿ 371(ಜೆ) ಹೋರಾಟಗಾರರ ಕೆಂಗಣ್ಣಿಗೆ ಈ ಪತ್ರ ಗುರಿಯಾಗಿದೆ.

Comments (0)

Your email address will not be published. Required fields are marked *

Back to top button