
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲವೇ ದಿನಗಳ ಮುನ್ನ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ಮಹತ್ವದ ನಿರ್ಧಾರವೊಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದಲ್ಲಿ ತಮಗೆ ಕ್ಲೀನ್ ಚೀಟ್ ನೀಡಿದ್ದ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ (SHRC) ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮೇ 28 ರಂದು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕೇವಲ ಒಂದು ವಾರದ ಮುನ್ನ, ಅಂದರೆ ಮೇ 21 ರ ಸುಮಾರಿಗೆ ಈ ಮಹತ್ವದ ಆಯಕಟ್ಟಿನ ಹುದ್ದೆಯ ನೇಮಕಾತಿ ಫೈನಲ್ ಆಗಿದೆ.

‘ಮುಡಾ’ ಕ್ಲೀನ್ ಚೀಟ್‌ಗೆ ಕೃತಜ್ಞತೆಯ ಉಡುಗೊರೆಯೇ?
ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಪ್ರಮುಖ ಬಡಾವಣೆಯಲ್ಲಿ 14 ಪರ್ಯಾಯ ನಿವೇಶನಗಳನ್ನು ಹಂಚಿಕೆ ಮಾಡಿದ್ದು ಕಾನೂನುಬಾಹಿರವಲ್ಲ ಎಂದು ತೀರ್ಮಾನಿಸಿ, ಸಿದ್ದರಾಮಯ್ಯ ಕುಟುಂಬಕ್ಕೆ ನ್ಯಾಯಮೂರ್ತಿ ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಸಂಪೂರ್ಣ ‘ಕ್ಲೀನ್ ಚೀಟ್’ ನೀಡಿತ್ತು. 2025ರ ಸೆಪ್ಟೆಂಬರ್‌ನಲ್ಲಿ ರಾಜ್ಯ ಸಚಿವ ಸಂಪುಟ ಈ ವರದಿಯನ್ನು ಅಂಗೀಕರಿಸಿತ್ತು. “ಸಿದ್ದರಾಮಯ್ಯ ಯಾರ ಸಾಲವನ್ನೂ ಇಟ್ಟುಕೊಳ್ಳುವ ವ್ಯಕ್ತಿಯಲ್ಲ. ತಮಗೆ ಸಂಕಷ್ಟದ ಸಮಯದಲ್ಲಿ ನೆರವಾದ ನಿವೃತ್ತ ನ್ಯಾಯಮೂರ್ತಿಗಳಿಗೆ SHRC ಅಧ್ಯಕ್ಷ ಹುದ್ದೆ ನೀಡುವ ಮೂಲಕ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ” ಎಂದು ರಾಜಕೀಯ ವಿಮರ್ಶಕರು ಬಹಿರಂಗವಾಗಿ ಟೀಕಿಸುತ್ತಿದ್ದಾರೆ.
ಕೊನೇ ಕ್ಷಣದ ನೇಮಕಾತಿ-ಸಂಶಯಗಳಿಗೆ ಆಸ್ಪದ!
ಮುಡಾ ಹಗರಣವು ಸಿದ್ದರಾಮಯ್ಯ ಸರ್ಕಾರಕ್ಕೆ ಭಾರಿ ಮುಜುಗರ ತಂದಿಟ್ಟಿತ್ತು. ಅಂತಹ ಹೊತ್ತಿನಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ಅನುಕೂಲಕರ ವರದಿ ನೀಡಿದ್ದ ನ್ಯಾಯಾಧೀಶರನ್ನೇ, ತಾವು ಅಧಿಕಾರದಿಂದ ನಿರ್ಗಮಿಸುವ ಕೊನೆಯ ಕ್ಷಣದಲ್ಲಿ ರಾಜ್ಯದ ಅತ್ಯುನ್ನತ ಸಂಸ್ಥೆಯೊಂದರ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ. ಹೊರಹೋಗುವ ಸರ್ಕಾರಗಳು ತಮ್ಮ ನಿಷ್ಠಾವಂತರಿಗೆ ಕೊನೆಯ ಕ್ಷಣದಲ್ಲಿ ನೀಡುವ ‘ಬಂಪರ್ ಗಿಫ್ಟ್’ ಇದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಈ ನೇಮಕಾತಿಯನ್ನು ಕೇವಲ ಸಿಎಂ ಒಬ್ಬರೇ ಮಾಡಿಲ್ಲ. ನಿಯಮಾವಳಿಗಳ ಪ್ರಕಾರ ವಿಧಾನ ಪರಿಷತ್ ಅಧ್ಯಕ್ಷ ಬಸವರಾಜ ಹೊರಟ್ಟಿ, ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹಾಗೂ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯೇ ಈ ನೇಮಕಾತಿಯನ್ನು ಅನುಮೋದಿಸಿದೆ ಎನ್ನಲಾಗಿದೆ.
ಬುಧವಾರವಷ್ಟೇ ಡಿ.ಕೆ. ಶಿವಕುಮಾರ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ, ಸಿದ್ದರಾಮಯ್ಯ ತಮ್ಮ ಕೊನೆಯ ದಿನಗಳಲ್ಲಿ ಮಾಡಿದ ಇಂತಹ ಆಯಕಟ್ಟಿನ ಹುದ್ದೆಗಳ ನೇಮಕಾತಿಯನ್ನು ಹೊಸ ಡಿಕೆಶಿ ಸರ್ಕಾರ ಮರುಪರಿಶೀಲಿಸುತ್ತದೆಯೇ ಅಥವಾ ಯಥಾಸ್ಥಿತಿ ಮುಂದುವರಿಸುತ್ತದೆಯೇ ಎಂಬ ಕೌತುಕ ಈಗ ಸೃಷ್ಟಿಯಾಗಿದೆ.
#Siddaramaiah #JusticePNDesai #SHRCChairman #MUDAScam #KarnatakaPolitics #FreedomTV #DKShivakumar #BreakingNews #Bengaluru #PoliticalControversy #HumanRightsCommission #CleanChit #KarnatakaGovernment




