
ಬೆಳಗಾವಿ: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಹಾಗೂ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ತಾರಕಕ್ಕೇರಿರುವ ಬೆನ್ನಲ್ಲೇ, ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅವರು ಹೈಕಮಾಂಡ್ ಮುಂದೆ ಹೊಸದೊಂದು ಬೇಡಿಕೆಯನ್ನು ಇಟ್ಟಿದ್ದಾರೆ. “ಇಲ್ಲಿಯವರೆಗೆ ಬೆಳಗಾವಿ ನಗರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದಿಂದ ಅಲ್ಪಸಂಖ್ಯಾತ ಸಮುದಾಯದ ಯಾರಿಗೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿಲ್ಲ. ಹೀಗಾಗಿ ಈ ಬಾರಿ ಅಲ್ಪಸಂಖ್ಯಾತ ಕೋಟಾದಡಿ ತಮಗೆ ಸಚಿವ ಸ್ಥಾನ ನೀಡಬೇಕು” ಎಂದು ಆಸೀಫ್ ಸೇಠ್ ಬಹಿರಂಗವಾಗಿಯೇ ಮಂತ್ರಿಗಿರಿಗೆ ಬೇಡಿಕೆ ಇಟ್ಟಿದ್ದಾರೆ.

CM ಬದಲಾವಣೆ ಹೈಕಮಾಂಡ್ ನಿರ್ಣಯ-ಸತೀಶಣ್ಣ ಅಧ್ಯಕ್ಷರಾಗಬೇಕು!
ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಕುರಿತು ಹೈಕಮಾಂಡ್‌ನಿಂದ ನಮಗೆ ಈವರೆಗೂ ಯಾವುದೇ ಅಧಿಕೃತ (Official) ಮಾಹಿತಿ ಬಂದಿಲ್ಲ. ಅಷ್ಟೇ ಅಲ್ಲದೇ, ಬೆಂಗಳೂರಿನಲ್ಲಿ ನಡೆಯಲಿದೆ ಎನ್ನಲಾದ ಶಾಸಕಾಂಗ ಪಕ್ಷದ (CLP) ಸಭೆಯ ಕುರಿತೂ ನಮಗೆ ಯಾವುದೇ ಸಂದೇಶ ಸಿಕ್ಕಿಲ್ಲ ಸಿಎಂ ಕುರ್ಚಿ ವಿಚಾರದಲ್ಲಿ ಹೈಕಮಾಂಡ್ ಅಂತಿಮವಾಗಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಒಬ್ಬ ಶಾಸಕನಾಗಿ ನಾನು ಅದಕ್ಕೆ ಸಂಪೂರ್ಣ ಬದ್ಧನಾಗಿರುತ್ತೇನೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸತೀಶ್ ಅಣ್ಣಾ ನಮ್ಮ ಜಿಲ್ಲೆಯ ಸರ್ವಸಮ್ಮತ ನಾಯಕರು. ಅವರು ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬುದು ನಮ್ಮ ಆಸೆಯಾಗಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಇಂತಹ ನಾಯಕರು ಸಿಗುವುದು ಅಪರೂಪ. ಅವರಿಗೆ ಹೈಕಮಾಂಡ್ ಉನ್ನತ ಸ್ಥಾನ ನೀಡಿದರೆ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ” ಎಂದರು.
ಸಿದ್ದು ಮತ್ತು ಡಿಕೆಶಿ ಇಬ್ಬರೂ ಜನನಾಯಕರೇ!
ಒಂದು ವೇಳೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಕಾಂಗ್ರೆಸ್‌ನ ಸಾಂಪ್ರದಾಯಿಕ ‘ಅಹಿಂದ’ ಮತಬ್ಯಾಂಕ್ ಮೇಲೆ ಹೊಡೆತ ಬೀಳಲಿದೆಯೇ? ಎಂಬ ಮಾಧ್ಯಮಗಳ ಪ್ರಶ್ನೆಗೆ ಶಾಸಕ ಆಸೀಫ್ ಸೇಠ್ ಅತ್ಯಂತ ರಾಜತಾಂತ್ರಿಕವಾಗಿ ಉತ್ತರಿಸಿದ್ದಾರೆ. ಸಿದ್ದರಾಮಯ್ಯ ಅವರು ಕೇವಲ ಒಂದು ಜನಾಂಗ ಅಥವಾ ಅಹಿಂದ ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಅವರು ಇಡೀ ರಾಜ್ಯದ ಎಲ್ಲಾ ಜನಾಂಗವನ್ನು ಮುನ್ನಡೆಸುತ್ತಿರುವ ಒಬ್ಬ ವರ್ಚಸ್ವಿ ‘ಮಾಸ್ ಲೀಡರ್’. ಅವರ ಆಡಳಿತ ಮತ್ತು ಕಾರ್ಯವೈಖರಿಯನ್ನು ಇಡೀ ಕರ್ನಾಟಕವೇ ಕೊಂಡಾಡಿದೆ. ಹಾಗೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಹೇಬರು ಕೂಡ ಪಕ್ಷಕ್ಕಾಗಿ ಅಪಾರವಾಗಿ ದುಡಿದಿದ್ದಾರೆ. ಅವರೂ ಕೂಡ ಒಬ್ಬ ಮಾಸ್ ಲೀಡರ್ ಆಗಿದ್ದು, ಯಾವುದೇ ಕೆಲಸವನ್ನಾದರೂ ಅತ್ಯಂತ ನಿಖರವಾಗಿ, ‘ಪಾಯಿಂಟ್ ಟೂ ಪಾಯಿಂಟ್’ (Point-to-Point) ಮಾಡುವ ಅದ್ಭುತ ಚಾಣಾಕ್ಷತನ ಹೊಂದಿದ್ದಾರೆ. ಇಬ್ಬರೂ ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆಯ ಗೊಂದಲ ಸೃಷ್ಟಿಯಾಗಿರುವುದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಉತ್ತರ ಕರ್ನಾಟಕ ಹಾಗೂ ಯುವ ಶಾಸಕರ ದಂಡು, ಹೈಕಮಾಂಡ್ ಮೇಲೆ ಸಚಿವ ಸ್ಥಾನಕ್ಕಾಗಿ ಭಾರಿ ಒತ್ತಡ ಹೇರುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಸಮಾನವಾಗಿ ಹೊಗಳುವ ಮೂಲಕ ಶಾಸಕ ಆಸೀಫ್ ಸೇಠ್ ಅವರು ಸೇಫ್ ಗೇಮ್ ಆಡಿದ್ದಾರಲ್ಲದೇ, ಬೆಳಗಾವಿ ಜಿಲ್ಲೆಯ ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಸಚಿವ ಸ್ಥಾನದ ಬೇಡಿಕೆಗೆ ಪ್ರಾದೇಶಿಕ ಹಾಗೂ ಅಲ್ಪಸಂಖ್ಯಾತ ಅಸ್ತ್ರವನ್ನು ಬಳಸಿಕೊಂಡಿದ್ದಾರೆ.
#FreedomTV #AsifSait #BelgaumNews #KarnatakaPolitics #CongressCMChange #Siddaramaiah #DKShivakumar #SatishJarkiholi #MinorityQuota #CabinetExpansion #BelagaviNorth #KannadaNews #BreakingNews




