Chikkamagaluru

ಶಿವಕುಮಾರ್ CM ಆಗ್ತಿರೋದು ಪರಮಾತ್ಮನ ಕೊಡುಗೆ- ರಂಭಾಪುರಿ ಶ್ರೀ!

rambapura Shree swamiji says gods gift DK shivakumar became CM

ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಅಂತಿಮಘಟ್ಟಕ್ಕೆ ತಲುಪಿರುವ ಬೆನ್ನಲ್ಲೇ, ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಮಹಾಸಂಸ್ಥಾನ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಮಹತ್ವದ ಬೆಳವಣಿಗೆಯ ಕುರಿತು ತಮ್ಮ ಆಶೀರ್ವಚನ ನೀಡಿದ್ದಾರೆ. 2023ರ ಚುನಾವಣೆಯ ಒಪ್ಪಂದದಂತೆ ಎರಡೂವರೆ ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಪ್ರಸಂಗ ಬಂದಿರುವುದು ಪರಮಾತ್ಮನ ಕೊಡುಗೆ” ಎಂದು ಶ್ರೀಗಳು ಬಣ್ಣಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಗದ್ಗುರುಗಳು, ಡಿಕೆಶಿ ಅವರ ತಾಳ್ಮೆ ಹಾಗೂ ಸಿದ್ದರಾಮಯ್ಯ ಉದಾರತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಅಧ್ಯಕ್ಷರು ಸಿಎಂ ಆಗೋದು ವಾಡಿಕೆ!


2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದಾಗ, ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. ಶಿವಕುಮಾರ್ ಅವರೇ ಸಿಎಂ ಆಗುವ ಸಂಭವವಿತ್ತು. ಆದರೆ ಹೈಕಮಾಂಡ್ ಅನುಭವಿಗಳಾದ ಸಿದ್ದರಾಮಯ್ಯನವರಿಗೆ ಮೊದಲ ಅವಕಾಶ ನೀಡಿ, ಇಬ್ಬರಿಗೂ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರ ನಿರ್ಣಯಿಸಿತ್ತು. ಅಧಿಕಾರ ಹಂಚಿಕೆಯ ಸುದೀರ್ಘ ಚರ್ಚೆಗಳ ನಡುವೆಯೂ ಡಿ.ಕೆ. ಶಿವಕುಮಾರ್ ಅವರು ಎಲ್ಲೂ ತಮ್ಮ ತಾಳ್ಮೆ ಮತ್ತು ಸಹನೆಯನ್ನು ಕಳೆದುಕೊಳ್ಳಲಿಲ್ಲ. ರಂಭಾಪುರಿ ಪೀಠದ ಗಂಗಾಧರ ಜಗದ್ಗುರುಗಳ ಮೇಲೆ ಅಪಾರ ನಂಬಿಕೆ ಇಟ್ಟು, ‘ನಾನು ಸಿಎಂ ಆಗೇ ಆಗ್ತೀನಿ’ ಎಂಬ ದೃಢ ನಿಶ್ಚಯ ಹೊಂದಿದ್ದರು. ಅದಕ್ಕೀಗ ಕಾಲ ಕೂಡಿಬಂದಿದೆ. ಹೈಕಮಾಂಡ್ ಸೂಚನೆ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಉದಾರ ಅಂತಃಕರಣದಿಂದ ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ. ಅವರ ಈ ರಾಜಕೀಯ ಮುತ್ಸದ್ದಿತನವನ್ನು ನಾವೆಲ್ಲರೂ ಮೆಚ್ಚಲೇಬೇಕು ಎಂದು ಶ್ರೀಗಳು ನುಡಿದರು.

ಪ್ರಯೋಜನವಿಲ್ಲದ ಯೋಜನೆಗಳಿಂದ ಬೊಕ್ಕಸ ಬರಿದು!
ಇದೇ ವೇಳೆ ರಾಜ್ಯದ ಹಾಲಿ ಪರಿಸ್ಥಿತಿ ಹಾಗೂ ಗ್ಯಾರೆಂಟಿ ಯೋಜನೆಗಳ ಕುರಿತು ರಂಭಾಪುರಿ ಶ್ರೀಗಳು ಸರ್ಕಾರಕ್ಕೆ ಕಠಿಣ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. “ರಾಜ್ಯದ ಅಭಿವೃದ್ಧಿಗೆ ನಾವೆಲ್ಲರೂ ಬಹಳಷ್ಟು ಅಪೇಕ್ಷೆ ಇಟ್ಟುಕೊಂಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಯೋಜನವಿಲ್ಲದ ಕೆಲವು ಯೋಜನೆಗಳಿಂದಾಗಿ ಸರ್ಕಾರದ ಬೊಕ್ಕಸ ಸಂಪೂರ್ಣ ಬರಿದಾಗುತ್ತಿದೆ. ಹೊಸದಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಇಂತಹ ವಿಷಯಗಳಲ್ಲಿ ಗಟ್ಟಿ ನಿಲುವು ತಾಳುವ ಆತ್ಮಬಲ ಹಾಗೂ ಶಕ್ತಿಯನ್ನು ಭಗವಂತ ನೀಡಲಿ.” ಎಂದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಜಾತಿ-ಧರ್ಮದ ಸಂಘರ್ಷಗಳು ಹೆಚ್ಚುತ್ತಿರುವುದು ಧರ್ಮಪೀಠಕ್ಕೆ ಭಾರಿ ನೋವು ತಂದಿದೆ. ಯಾವುದೇ ಜಾತಿ-ಧರ್ಮ ಇರಲಿ, ಶಾಲೆಯಲ್ಲಿ ‘ಸಮವಸ್ತ್ರ’ ಎಂಬ ಶಿಸ್ತಿನ ನಿಯಮವನ್ನು ಪರಿಪಾಲಿಸಿಕೊಂಡು ಬಂದ ಅದ್ಭುತ ದಿನಗಳಿದ್ದವು. ಆದರೆ ಇಂದು ಓದುವ ಮಕ್ಕಳ ಮನಸ್ಸಿನಲ್ಲೂ ಜಾತಿಯ ಭಾವನೆ ಬಿತ್ತಲಾಗುತ್ತಿದ್ದು, ಇದು ನಿಲ್ಲಬೇಕು. ಡಿಕೆಶಿ ಆಡಳಿತದಲ್ಲಿ ಇಂತಹ ಸಂಘರ್ಷದ ಸಂದರ್ಭಗಳು ಬರಬಾರದು.

ಸ್ವಪಕ್ಷ-ವಿಪಕ್ಷ ಒಟ್ಟಾಗಿ ಹೋಗಿ- ಶ್ರೀಗಳ ಕಿವಿಮಾತು
ಹೊಸ ಆಡಳಿತದ ಯಶಸ್ಸಿಗೆ ಜಾಣ್ಮೆ ಅತ್ಯಗತ್ಯ ಎಂದ ಶ್ರೀಗಳು, “ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಎಲ್ಲಾ ಸಮುದಾಯದ ಜನರನ್ನು ಸಮಾನವಾಗಿ ಮೇಲೆತ್ತುವ ಕೆಲಸ ಮಾಡಬೇಕು. ಸ್ವಪಕ್ಷವಿರಲಿ ಅಥವಾ ವಿರೋಧ ಪಕ್ಷವಿರಲಿ, ಸರ್ಕಾರ ಒಳ್ಳೆಯ ಕೆಲಸ ಮಾಡಿದಾಗ ಎಲ್ಲರೂ ಮುಕ್ತವಾಗಿ ಬೆಂಬಲಿಸಬೇಕು. ಎಲ್ಲರ ಸಹಕಾರವನ್ನು ಜಾಣ್ಮೆಯಿಂದ ಪಡೆದು ಡಿಕೆಶಿ ಉತ್ತಮ ಆಡಳಿತ ನೀಡಲಿ” ಎಂದು ಹಾರೈಸಿದರು.

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಪರ್ವಕ್ಕೆ ಕೇವಲ ರಾಜಕೀಯ ನಾಯಕರು ಮಾತ್ರವಲ್ಲ, ಪ್ರಮುಖ ಧರ್ಮಪೀಠಗಳೂ ಮಾನಸಿಕವಾಗಿ ಸಿದ್ಧವಾಗಿವೆ ಎಂಬುದಕ್ಕೆ ರಂಭಾಪುರಿ ಶ್ರೀಗಳ ಈ ಆಶೀರ್ವಚನವೇ ಸಾಕ್ಷಿ.

#FreedomTV #RambhapuriSree #DKShivakumar #Siddaramaiah #KarnatakaPolitics #CongressCMChange #Chikkamagaluru #ReligiousLeaders #KarnatakaDevelopment #BreakingNews #KannadaNews

Comments (0)

Your email address will not be published. Required fields are marked *

Back to top button