ಕ್ರಿಕೆಟ್ಸುದ್ದಿ

ಸಿಎಸ್‌ಕೆ ವಿರುದ್ಧದ ಬಿಗ್ ಫೈಟ್‌ಗೂ ಮುನ್ನ ತಿಮ್ಮಪ್ಪನ ಮೊರೆ ಹೋದ ಆರ್‌ಸಿಬಿ ಸಾರಥಿಗಳು!

ಐಪಿಎಲ್ 2026ರ ಕಣದಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ಈಗ ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ತಂಡದ ನಾಯಕ ರಜತ್ ಪಾಟಿದಾರ್ ಮತ್ತು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಆಟಗಾರರು, ಮೈದಾನಕ್ಕಿಳಿಯುವ ಮುನ್ನ ಶ್ರೀವಾರಿ ಆಶೀರ್ವಾದ ಪಡೆದಿದ್ದಾರೆ.

ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮುನ್ನವೂ ತಂಡದ ಆಟಗಾರರು ತಿರುಮಲಕ್ಕೆ ಭೇಟಿ ನೀಡಿದ್ದರು. ಆ ಭೇಟಿ ತಂಡಕ್ಕೆ ಅದೃಷ್ಟ ತಂದಿತ್ತು ಎಂಬ ಬಲವಾದ ನಂಬಿಕೆ ಅಭಿಮಾನಿಗಳಲ್ಲಿದೆ. ಇದೀಗ ಏಪ್ರಿಲ್ 5 ರಂದು ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ತಿಮ್ಮಪ್ಪನ ದರ್ಶನ ಪಡೆದಿರುವುದು ಕುತೂಹಲ ಮೂಡಿಸಿದೆ. ಈ ಬಾರಿಯೂ ತಿಮ್ಮಪ್ಪನ ಕೃಪೆ ಆರ್‌ಸಿಬಿ ಮೇಲೆ ಇರಲಿದೆಯೇ ಎಂದು ಕಾದು ನೋಡಬೇಕಿದೆ.

ಐಪಿಎಲ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿರುವ ಈ ಭೇಟಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ ದೇವಸ್ಥಾನದ ಸಂಪ್ರದಾಯದಂತೆ ಪಂಚೆ ಉಟ್ಟು, ಹಣೆ ಮೇಲೆ ತಿಲಕ ಧರಿಸಿ ಸರಳವಾಗಿ ದರ್ಶನ ಪಡೆದಿದ್ದಾರೆ. ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಕೂಡ ತಂಡವು ಸಮತೋಲನದಿಂದ ಕೂಡಿದ್ದು, ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಮನಾರ್ಹವೆಂದರೆ, ಕಳೆದ ಬಾರಿಯ ಚಾಂಪಿಯನ್ಸ್ ಪಟ್ಟ ಗೆದ್ದ ನಂತರ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಭಾನುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸಿಎಸ್‌ಕೆ ವಿರುದ್ಧದ ಪಂದ್ಯವು ಟೂರ್ನಿಯ ಅತ್ಯಂತ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿದ್ದು, ಈ ಹಂತದಲ್ಲಿ ತಿಮ್ಮಪ್ಪನ ಆಶೀರ್ವಾದ ಪಡೆದಿರುವುದು ತಂಡಕ್ಕೆ ಮಾನಸಿಕ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಉಳಿದ ಆಟಗಾರರು ಈಗಾಗಲೇ ಅಭ್ಯಾಸ ಶಿಬಿರದಲ್ಲಿ ನಿರತರಾಗಿದ್ದು, ಚೆನ್ನೈ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ.

Comments (0)

Your email address will not be published. Required fields are marked *

Back to top button