ವಿಶೇಷಸುದ್ದಿ

ಜೂನ್‌ ತಿಂಗಳಲ್ಲಿ ಜನ್ಮದಿನದ ಸುಗ್ಗಿ; ಬರ್ತಡೇ ಕೇಕ್‌ಗೆ ಭಾರಿ ಬೇಡಿಕೆ!

ಧಾರವಾಡ : ಜೂನ್‌ ತಿಂಗಳಲ್ಲಿ ಜನ್ಮ ದಿನ ಆಚರಿಸಿಕೊಳ್ಳುವವರಿಗೆ ಲೆಕ್ಕವೇ ಇಲ್ಲ. ಹೀಗಾಗಿ ಈ ತಿಂಗಳ ಪೂರ್ತಿ ಬೇಕರಿಗಳಲ್ಲಿ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಜೂನ್‌ ತಿಂಗಳು ಆರಂಭವಾದರೆ ಸಾಕು ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಇನ್ಸ್ಟಾಗ್ರಾಂನಲ್ಲಿ 30- 35 ವರ್ಷ ಮೇಲ್ಪಟ್ಟ ಬಹುತೇಕ ಜಧಿನರ ಜನ್ಮದಿನಕ್ಕೆ ಶುಭಾಶಯಗಳೇ ತುಂಬಿರುತ್ತವೆ. ಜತೆಗೆ ಸ್ನೇಹಿತರಿಂದ ಬರ್ತ ಡೇ ಪಾರ್ಟಿಗೆ ಸಿದ್ಧತೆಯೂ ಜೋರಿರುತ್ತದೆ. ಹೀಗಾಗಿ ಕೇಕ್‌ ಬೇಕೆಬೇಕಾಗುತ್ತದೆ. ಜೂನ್‌ ತಿಂಗಳಲ್ಲಿ ಉಳಿದ ತಿಂಗಳಿಗಿಂತ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕೇಕ್‌ ಮಾರಾಟವಾಗುತ್ತವೆ ಎನ್ನುತ್ತಾರೆ ಬೇಕರಿ ಮಾಲೀಕ ರಾಮಗೋಪಾಲ.

ದರ ಹೆಚ್ಚಿಲ್ಲ, ಖರೀದಿ ಹೆಚ್ಚು:

ಜನ್ಮದಿನದ ಸಂಭ್ರಮಾಚರಣೆಯನ್ನು ಕೇಕ್‌ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು, ಕಾಲು ಕೆಜಿ ಗಾತ್ರದ ಸಣ್ಣ ಕೇಕ್‌ನಿಂದ 10 ಕೆಜಿಯ ಬೃಹತ್‌ ಗಾತ್ರದ ಕೇಕ್‌ಗಳನ್ನು ಬೇಕರಿಗಳಲ್ಲಿಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿದೆ. ಜೂನ್‌ ಮೊದಲ ಎರಡ್ಮೂರು ವಾರದಲ್ಲಿ ಸಾಕಷ್ಟು ಜನರು ಕೇಕ್‌ ಖರೀದಿ ಮಾಡುತ್ತಾರೆ. ಆದರೆ, ಈ ತಿಂಗಳಲ್ಲಿ ಮಾತ್ರ ಹೆಚ್ಚಿನ ಕೇಕ್‌ ವಹಿವಾಟು ನಿಶ್ಚಿತ ಎನ್ನುತ್ತಾರೆ ಬೇಕರಿ ವ್ಯಾಪಾರಸ್ಥರು.

ಜೂನ್‌ನಲ್ಲಿಯೇ ಏಕೆ ?

1961 ರಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದು, ಶಾಲೆಗೆ ಹೋಗದ ಮಕ್ಕಳ ಗಣತಿ ಆರಂಭವಾಯಿತು. ಆಗ ಬಹುತೇಕರಲ್ಲಿ ಜನ್ಮ ದಾಖಲೆಗಳೂ ಇರಲಿಲ್ಲ. ಅದಕ್ಕಾಗಿ ಜನ್ಮದಿನಾಂಕ ದಾಖಲಿಸಲು ಒಂದು ಮಾರ್ಗ ಸೂಚಿ ನೀಡಲಾಯಿತು.

ಅದರಂತೆ ಮಗು ಹುಟ್ಟಿದ ವರ್ಷ ನೆನಪಿದ್ದು ಉಳಿದ ಯಾವುದೂ ನೆನಪಿಲ್ಲದಿದ್ದರೆ ಮಗುವಿನ ಜನ್ಮ ದಿನಾಂಕವು ಆ ವರ್ಷದ ಜೂನ್‌ನ ಯಾವುದಾರರು ಒಂದು ದಿನಾಂಕ ದಾಖಲಿಸಬೇಕು. ವರ್ಷ ತಿಂಗಳು ನೆನಪಿದ್ದು ದಿನಾಂಕ ಗೊತ್ತಿಲ್ಲದಿದ್ದರೆ ಆ ತಿಂಗಳ ಒಂದನೇ ತಾರಿಖು ಎಂದು ನಮೂದಿಸಲು ಸೂಚಿಸಿತು.

ಅಲ್ಲದೇ ಹೆಚ್ಚಾಗಿ ಶಾಲಾ ದಾಖಲಾತಿ ಜೂನ್‌ನಲ್ಲಿ ನಡೆಯುತ್ತಿತ್ತು. ಮಗುವಿಗೆ 6 ವರ್ಷ ಪೂರ್ಣಗೊಳಿಸಲು ಈ ರೀತಿಯೇ ನಮೂದಿಸಲಾಗುತ್ತಿತ್ತು. ಅದರಂತೆ ಅನೇಕರ ಜನ್ಮ ದಿನಾಂಕ ಜೂನ್‌ ತಿಂಗಳಲ್ಲಿಯೇ ಬರುತ್ತವೆ. ಕ್ರಮೇಣ ಜನನ ಪ್ರಮಾಣ ಪತ್ರ ಹಾಜರು ಪಡಿಸುವ ನಿಯಮ ಜಾರಿಗೆ ಬಂತು ಎನ್ನುತ್ತಾರೆ ನಿವೃತ್ತ ಶಿಕ್ಷಕರು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

Comments (0)

Your email address will not be published. Required fields are marked *

Back to top button