
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮುಂಜಾನೆ ವಾಕಿಂಗ್ಗೆ ತೆರಳಿದ್ದವರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು, ಹುಬ್ಬಳ್ಳಿ ರಸ್ತೆಯಲ್ಲಿರುವ ಚೆನ್ನಮ್ಮ ಕಾಲೇಜ್ ಬಳಿ ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ಮೂವರಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಈ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಶಿವಾನಂದ ಹುಲಕೋಟಿ ಹಾಗೂ ಅಶೋಕ ಸರವಿ ಎಂಬುವವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಈ ಅಪಘಾತದಲ್ಲಿ ಎಮ್. ಎಸ್. ಚಾಕಲಬಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸರ ನೆರವಿನೊಂದಿಗೆ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗದ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರತಿದಿನದಂತೆ ಇಂದೂ ಕೂಡ ಆರೋಗ್ಯ ಕಾಪಾಡಿಕೊಳ್ಳಲು ವಾಕಿಂಗ್ ಹೊರಟಿದ್ದ ಇವರಿಗೆ ವೇಗದೂತವಾಗಿ ಬಂದ ಕಾರು ಮೃತ್ಯುವಾಗಿ ಅಪ್ಪಳಿಸಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ನಂತರ ಕಾರು ಸವಾರ ಪರಾರಿಯಾಗಿದ್ದು, ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರು ಮತ್ತು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆ ಅಥವಾ ಅತಿ ವೇಗವೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.




