ಸಿನಿಮಾ

ಹೊಂಬಾಳೆ ಮರೆತ ರಿಷಬ್ ಶೆಟ್ಟಿ? ಗಾಂಧಿನಗರದಲ್ಲಿ ಶುರುವಾಯ್ತು ಹೊಸ ಗುಸುಗುಸು

ಕಾಂತಾರ ಸಿನಿಮಾದ ಅಭೂತಪೂರ್ವ ಗೆಲುವಿನ ನಂತರ ರಿಷಬ್ ಶೆಟ್ಟಿ ಮುಂದಿನ ಹೆಜ್ಜೆಗಳ ಬಗ್ಗೆ ಗಾಂಧಿನಗರದಲ್ಲಿ ಹೊಸ ಗುಸುಗುಸು ಕೇಳಿಬರುತ್ತಿದೆ. ದಕ್ಷಿಣ ಭಾರತದ ಈ ಸ್ಟಾರ್ ನಟ ಕೂಡ ಈಗ ನಟಿ ರಶ್ಮಿಕಾ ಮಂದಣ್ಣ ಅವರ ದಾರಿ ಹಿಡಿದ್ದಾರ ಎನ್ನುವ ಚರ್ಚೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರಿ ಸಂಚಲನ ಮೂಡಿಸಿದೆ. ಪರಭಾಷಾ ನಿರ್ಮಾಪಕರ ಜೊತೆ ರಿಷಬ್ ಕೈಜೋಡಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ವಿಶೇಷವಾಗಿ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವಿ ಮೇಕರ್ಸ್’ ಜೊತೆ ದೋಸ್ತಿ ಬೆಳೆಸಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡಿದೆ. ಈ ಬೆಳವಣಿಗೆಯಿಂದಾಗಿ ಡಿವೈನ್ ಸ್ಟಾರ್ ನಡೆ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

ರಿಷಬ್ ಶೆಟ್ಟಿಗೆ ಸಕ್ಸಸ್ ಅಮಲು ತಲೆಗೇರಿದೆಯೇ ಎನ್ನುವ ಪ್ರಶ್ನೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ತಮಗೆ ಜಾಗತಿಕ ಮಟ್ಟದ ಗುರುತು ತಂದುಕೊಟ್ಟ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಮರೆತಿದ್ದಾರೆಯೇ ಎನ್ನುವ ಆಕ್ರೋಶ ಅಭಿಮಾನಿಗಳಲ್ಲಿ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನಡೆದ INCA ಅವಾರ್ಡ್ಸ್ ಸಮಾರಂಭದಲ್ಲಿ ವೇದಿಕೆ ಮೇಲೆ ಮಾತನಾಡಿದ ರಿಷಬ್, ತಮ್ಮ ಏಳಿಗೆಗೆ ಕಾರಣವಾದ ಹೊಂಬಾಳೆ ಫಿಲ್ಮ್ಸ್ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆ ಮೌನಕ್ಕೆ ಶರಣಾಗಿದ್ದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಬೆಳೆದ ಮೇಲೆ ಹತ್ತಿದ ಏಣಿಯನ್ನೇ ಒದೆಯುವ ಕೆಲಸಕ್ಕೆ ರಿಷಬ್ ಕೈ ಹಾಕಿದ್ದಾರೆಯೇ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿವೆ.

ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಕೂಡ ತಮಗೆ ಬ್ರೇಕ್ ನೀಡಿದ ಸಂಸ್ಥೆಯನ್ನು ಮರೆತಿದ್ದಾರೆ ಎನ್ನುವ ಆರೋಪ ಎದುರಿಸಿದ್ದರು. ಈಗ ರಿಷಬ್ ಶೆಟ್ಟಿ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆಯೇ ಎನ್ನುವ ಗುಮಾನಿ ದಟ್ಟವಾಗಿದೆ. ಕಾಂತಾರ ಸಕ್ಸಸ್ ಬೆನ್ನಲ್ಲೇ ಅವರು ಹೈದರಾಬಾದ್‌ನತ್ತ ಮುಖ ಮಾಡಿದ್ದು, ತೆಲುಗು ಚಿತ್ರರಂಗದ ದೊಡ್ಡ ನಿರ್ಮಾಪಕರ ಜೊತೆ ಸಿನಿಮಾ ಮಾಡಲು ಸ್ಕೆಚ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಕೇವಲ ಕನ್ನಡಕ್ಕಷ್ಟೇ ಸೀಮಿತವಾಗದೆ ಗ್ಲೋಬಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿರುವ ರಿಷಬ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ಸಿದ್ಧತೆ ನಡೆಸುತ್ತಿರುವುದು ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಎನ್ನಲಾಗುತ್ತಿದೆ.

Comments (0)

Your email address will not be published. Required fields are marked *

Back to top button