
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಆಂತರಿಕ ಪೈಪೋಟಿ ಮತ್ತು ಜಂಗೀಕುಸ್ತಿ ಮುಂದುವರಿದಿದ್ದು, ಇತ್ತೀಚಿನ ದೆಹಲಿ ಬೆಳವಣಿಗೆಗಳ ಬಳಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಶಾಸಕ ಶರತ್ ಬಚ್ಚೇಗೌಡ ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿ ಮರಳಿದ್ದು, ಈ ಪ್ರಯಾಣವು ಸಚಿವ ಸಂಪುಟ ಸೇರ್ಪಡೆಯ ಕಸರತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ದೆಹಲಿ ಆಪರೇಷನ್ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿರುವ ಅವರು, ಈ ಬಗ್ಗೆ ಹೊಸಕೋಟೆಯಲ್ಲಿ ಸ್ಪಷ್ಟನೆ ನೀಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ತಮ್ಮ ದೆಹಲಿ ಪ್ರಯಾಣದ ಬಗ್ಗೆ ಪ್ರತಿಕ್ರಿಯಿಸಿರುವ ಶರತ್ ಬಚ್ಚೇಗೌಡ, ಸದ್ಯಕ್ಕೆ ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಹೇಳಿದ್ದಾರೆ. ಅಧಿಕಾರಕ್ಕಾಗಿ ಹಪಹಪಿಸುವ ಬದಲಾಗಿ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಅವರು ತಿಳಿಸಿದ್ದಾರೆ. ರಾಜಕೀಯದಲ್ಲಿ ಇರುವ ಮೇಲೆ ಸಚಿವ ಸ್ಥಾನದ ಆಸೆ ಎಲ್ಲರಿಗೂ ಇರುವುದು ಸಹಜ, ಆದರೆ ಅದಕ್ಕಾಗಿ ತಾವು ಯಾವುದೇ ಒತ್ತಡ ಹೇರುತ್ತಿಲ್ಲ ಎನ್ನುವ ಮೂಲಕ ಸಮತೋಲಿತ ಹೇಳಿಕೆಯನ್ನು ನೀಡಿದ್ದಾರೆ.

ಸದ್ಯ ಕಾಂಗ್ರೆಸ್ ಪಕ್ಷದ ಒಳಗಿನ ಅಧಿಕಾರ ಹಂಚಿಕೆಯ ಈ ಜಿದ್ದಾಜಿದ್ದಿನ ನಡುವೆ ಶರತ್ ಬಚ್ಚೇಗೌಡ ಈ ನಡೆ ಗಮನಾರ್ಹವಾಗಿದೆ. ಸಚಿವ ಸ್ಥಾನ ಸಿಕ್ಕರೆ ನಿಭಾಯಿಸಲು ಸಿದ್ಧರಿರುವ ಅವರು, ಮೇಲ್ನೋಟಕ್ಕೆ ಮಾತ್ರ ತಾವು ಯಾವುದೇ ಆಸೆ ಇಟ್ಟುಕೊಂಡಿಲ್ಲ ಎಂದು ಹೇಳುತ್ತಿದ್ದಾರೆ. ದೆಹಲಿ ನಾಯಕರ ಭೇಟಿಯ ನಂತರದ ಅವರ ಈ ಮೃದು ಧೋರಣೆಯು ರಾಜಕೀಯ ಅಂಗಳದಲ್ಲಿ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.




