ಸಂಸದ ಶಶಿ ತರೂರ್ ಮೇಲೆ ಹಲ್ಲೆಗೆ ಯತ್ನ..!

ಕೇರಳ ವಿಧಾನಸಭಾ ಚುನಾವಣೆಯ ಕಾವಿನ ನಡುವೆ ಮಲಪ್ಪುರಂ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ವಂಡೂರಿನ ಚೆಲ್ಲಿತೋಡೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಪಿ. ಅನಿಲ್ ಕುಮಾರ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸಂಜೆ 7 ಗಂಟೆಯ ಸುಮಾರಿಗೆ ಬೈಕ್‌ಗಳಲ್ಲಿ ಬಂದ ಗುಂಪೊಂದು ಶಶಿ ತರೂರ್ ಅವರ ಬೆಂಗಾವಲು ವಾಹನವನ್ನು ಅಡ್ಡಗಟ್ಟಿದ್ದು, ಈ ಸಂದರ್ಭದಲ್ಲಿ ಸಂಸದರ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾದ ತರೂರ್ ಅವರ ಗನ್ ಮ್ಯಾನ್ ಮೇಲೆಯೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಘಟನೆಯ ತೀವ್ರತೆಯನ್ನು ಕಂಡು ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಈ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಮಲಪ್ಪುರಂ ಪೊಲೀಸರು ಐವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಪ್ರಮುಖ ವ್ಯಕ್ತಿಯನ್ನು ಕಾಳಿಕಾವು ನಿವಾಸಿ ಉಮರ್ ಎಂದು ಗುರುತಿಸಲಾಗಿದ್ದು, ದಾಳಿಕೋರರು ಬಳಸಿದ್ದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗನ್ ಮ್ಯಾನ್ ನೀಡಿದ ಅಧಿಕೃತ ದೂರಿನ ಮೇರೆಗೆ ತನಿಖೆ ಚುರುಕುಗೊಂಡಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ದಾಳಿಯ ಹಿಂದೆ ಯಾವುದೇ ರಾಜಕೀಯ ಪಿತೂರಿ ಅಥವಾ ವೈಯಕ್ತಿಕ ದ್ವೇಷ ಅಡಗಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿಯೇ ಅಡ್ಡಿಪಡಿಸಲು ಈ ಕೃತ್ಯ ಎಸಗಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಯು ಕೇರಳದ ಚುನಾವಣಾ ಕಣದಲ್ಲಿ ಭದ್ರತೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.




