ಟೇಕ್ ಆಫ್ ಆಗ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ!
Bomb threat to Indigo flight – Note found in the lavatory!

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಗುರುವಾರ ರಾತ್ರಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಂಗಳೂರಿನಿಂದ ಅಹಮದಾಬಾದ್‌ಗೆ ಹೊರಡಲು ಸಿದ್ಧವಾಗುತ್ತಿದ್ದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್ ಬೆದರಿಕೆ ಚೀಟಿಯೊಂದು ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.
ಗುರುವಾರ ಸಂಜೆ ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳಬೇಕಿದ್ದ ಇಂಡಿಗೋ 6E-6423 (BLR-AMD) ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಟೇಕ್ ಆಫ್ ಆಗುವ ಮುನ್ನ ಶೌಚಾಲಯವನ್ನು ಪರಿಶೀಲಿಸಿದಾಗ ಅಲ್ಲಿ ಒಂದು ಚೀಟಿ ಪತ್ತೆಯಾಗಿದೆ. ಅದರಲ್ಲಿ ದಯವಿಟ್ಟು ಹೋಗಬೇಡಿ, ಬಾಂಬ್ ಇದೆ ಎಂದು ಬರೆಯಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದಾರೆ.
ನಂತರ, ಶೋಧ ಕಾರ್ಯಾಚರಣೆ ತಕ್ಷಣವೇ ಪ್ರಾರಂಭಿಸಿ, ವಿಮಾನದಲ್ಲಿ ಸಂಪೂರ್ಣವಾಗಿ ಭದ್ರತಾ ಪರಿಶೀಲನೆ ನಡೆಸಲಾಯಿತು. ಆದರೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಈ ಕುರಿತು ಕೆಐಎಎಲ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ವಿಮಾನಯಾನ ಸಂಸ್ಥೆ ದೂರು ದಾಖಲಿಸಿದೆ.
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿ ವ್ಯಕ್ತಿಯನ್ನು ಗುರುತಿಸಲು ಮತ್ತು ಈ ಬೆದರಿಕೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ.




