
ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಬರೋಬ್ಬರಿ 165 ಕೋಟಿ ದೋಚಿ ಖದೀಮರು ದುಬೈಗೆ ಎಸ್ಕೇಪ್ ಆಗಿದ್ದಾರೆ.
ಬೆಳಗಾವಿಯ ಟಿಳಕವಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಅಪೇಕ್ಸ್ ಬಿಜ್ ಕಾರ್ಪ್’ಎಂಬ ಸಂಸ್ಥೆಯೊಂದು 3500 ಜನರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ 165 ಕೋಟಿ ವಂಚಿಸಿದೆ. ಜನರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿದ್ದ ಸಂಸ್ಥೆಯ ಮಾಲೀಕರು, ಇದೀಗ ಕಚೇರಿಗೆ ಬೀಗ ಜಡಿದು ಪರಾರಿಯಾಗಿದ್ದಾರೆ.
‘ಅಪೇಕ್ಸ್ ಬಿಜ್ ಕಾರ್ಪ್’ ಸಂಸ್ಥೆಯ ಮಾಲೀಕರಾದ ಕಾಶಿನಾಥ್ ಮತ್ತು ಗಣೇಶ್ ಭಂಡಾರಿ, ಸಾರ್ವಜನಿಕರಿಗೆ ಆಕರ್ಷಕ ಬಡ್ಡಿಯ ಆಮಿಷವೊಡ್ಡಿ ತಮ್ಮ ಜಾಲಕ್ಕೆ ಸೆಳೆದುಕೊಂಡಿದ್ದರು. ಹೂಡಿಕೆದಾರರಿಗೆ 1 ಲಕ್ಷ ರೂಪಾಯಿಗೆ ತಿಂಗಳಿಗೆ 4 ಸಾವಿರ ರೂಪಾಯಿ ಬಡ್ಡಿ ನೀಡುವ ಆಮಿಷವೊಡ್ಡಿ ಹಣ ಸಂಗ್ರಹಿಸಿದ್ದರು.
ಹಣ ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ಅಸಲು ಹಣವನ್ನು ವಾಪಸ್ ನೀಡುವುದಾಗಿ ನಂಬಿಸಿದ್ದರು. ಇದನ್ನು ನಂಬಿ ಬೆಳಗಾವಿ ಮತ್ತು ಸುತ್ತಮುತ್ತಲಿನ ಸುಮಾರು 3,500ಕ್ಕೂ ಹೆಚ್ಚು ಮಂದಿ ತಮ್ಮ ಕಷ್ಟಪಟ್ಟು ದುಡಿದ ಹಣವನ್ನು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ಹಲವು ವರ್ಷಗಳಿಂದ ಸಾರ್ವಜನಿಕರಿಂದ ನೂರಾರು ಕೋಟಿ ಸಂಗ್ರಹವಾಗಿದ್ದು, ಬೆಳಗಾವಿ ಸೇರಿ ಸುತ್ತಮುತ್ತಲಿನ 3500 ಜನರು ವಂಚನೆಗೊಳಗಾಗಿದ್ದಾರೆ.
ಸಂಸ್ಥೆಯ ಮಾಲೀಕರಾದ ಕಾಶಿನಾಥ್ ಮತ್ತು ಗಣೇಶ್ ಭಂಡಾರಿ ಇದೀಗ ನಾಪತ್ತೆಯಾದ ಬೆನ್ನಲ್ಲೇ ಹೂಡಿಕೆದಾರರು ಬೆಳಗಾವಿ ಡಿಸಿ ಮೊರೆ ಹೋಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ, ವಶಪಡಿಸಿಕೊಂಡ ಹಣವನ್ನು ವಾಪಸ್ ಕೊಡಿಸುವಂತೆ ಒತ್ತಾಯಿಸಿದ್ದಾರೆ.




