ಆರ್ಥಿಕ ಸಂಕಷ್ಟವೇ ಕೃಷಿ ಸ್ನೇಹಿತನ ಸಾವಿಗೆ ಕಾರಣ – ತನಿಖೆಯಲ್ಲಿ ಬೆಳಕಿಗೆ!
Financial hardship was the cause of the death of a farmer friend - investigation reveals!

ಬೆಂಗಳೂರು : ನಟಿ ಕೃಷಿ ತಾಪಂಡ ನಿವಾಸದಲ್ಲಿ ಅವರ ಸ್ನೇಹಿತ ವೈಶಾಕ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಚುರುಕುಗೊಂಡಿದ್ದು, ವಿಚಾರಣೆ ವೇಳೆ ಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ.
ಮೃತ ವೈಶಾಕ್ ಕಳೆದ ಕೆಲವು ತಿಂಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು. ಇದೇ ಕಾರಣದಿಂದ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರ ಎದುರು ಹೇಳಿಕೆ ದಾಖಲಿಸಿರುವ ನಟಿ ಕೃಷಿ ತಾಪಂಡ, ವೈಶಾಕ್ ಆರ್ಥಿಕ ಸಂಕಷ್ಟದಲ್ಲಿದ್ದ ಕಾರಣ ನಾನೇ ಆಗಾಗ ಅವರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. 40 ರಿಂದ 50 ಸಾವಿರ ರೂಪಾಯಿಗಳವರೆಗೆ ಹಲವು ಬಾರಿ ಹಣ ವರ್ಗಾವಣೆ ಮಾಡಿರುವ ಬ್ಯಾಂಕ್ ದಾಖಲೆಗಳನ್ನು ನಟಿ ಪೊಲೀಸರಿಗೆ ನೀಡಿದ್ದಾರೆ.
ಏನಿದು ಪ್ರಕರಣ?
ಉದ್ಯಮಿ ವೈಶಾಕ್ ಅವರಿಗೆ ವಿವಾಹವಾಗಿದ್ದರೂ, ಅವರು ಪತ್ನಿಯಿಂದ ದೂರವಾಗಿದ್ದರು. ಸಾವನ್ನಪ್ಪುವ ಕೆಲವು ದಿನಗಳ ಮುಂಚೆಯಿಂದಷ್ಟೇ ಅವರು ನಟಿ ಕೃಷಿ ತಾಪಂಡ ಅವರ ಫ್ಲ್ಯಾಟ್ನಲ್ಲಿ ಬಂದು ನೆಲೆಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ವೈಶಾಕ್ ನೇಣಿಗೆ ಶರಣಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವೈಶಾಕ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ನನಗೆ ಯಾರ ಮೇಲೂ ಅನುಮಾನವಿಲ್ಲ, ಆದರೆ ನನ್ನ ಪತಿಯ ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿಯಲು ಸಂಪೂರ್ಣ ತನಿಖೆ ನಡೆಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.




