ಸಿನಿಮಾ ಸ್ಟೈಲಲ್ಲಿ ದಯಾನಂದ ರೆಡ್ಡಿ ಅಪಹರಣ; 3 ಕೋಟಿಗೆ ಬೇಡಿಕೆ!

ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ಸಿನಿಮೀಯ ಶೈಲಿಯ ಕಿಡ್ನಾಪ್ ನಡೆದಿದೆ. ಬಿಜೆಪಿ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ (MLC) ದಯಾನಂದ ರೆಡ್ಡಿ ಅವರನ್ನು ದುಷ್ಕರ್ಮಿಗಳ ತಂಡವೊಂದು ಗನ್ ಪಾಯಿಂಟ್ನಲ್ಲಿ ಅಪಹರಿಸಿ, ಬರೋಬ್ಬರಿ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಆನೇಕಲ್ ಸಮೀಪದ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ನಡೆದ ಈ ರೋಚಕ ಅಪಹರಣ ಪ್ರಕರಣದಿಂದ ಇಡೀ ರಾಜಧಾನಿ ಬೆಚ್ಚಿಬಿದ್ದಿದ್ದು, ಜೀವಭಯದ ನಡುವೆಯೂ ಮಾಜಿ ಎಂಎಲ್ಸಿ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿಮಗೆ ಗಿಫ್ಟ್ ಬಂದಿದೆ’ ಎಂದು ಕಾರು ನಿಲ್ಲಿಸಿದ ಕಿಲಾಡಿಗಳು!
ಪೊಲೀಸ್ ದೂರಿನ ಪ್ರಕಾರ, ದಯಾನಂದ ರೆಡ್ಡಿ ಅವರು ತಡರಾತ್ರಿ 12:15ರ ಸುಮಾರಿಗೆ ಆನೇಕಲ್ ರಸ್ತೆಯ ಹುಸ್ಕೂರು ಬಳಿಯಿರುವ ತಮ್ಮದೇ ಮಾಲೀಕತ್ವದ ‘ಗೋಲ್ಡ್ ಕಾಯಿನ್ ಕ್ಲಬ್’ನಿಂದ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದರು. ಹೀಲಲಿಗೆ ಗ್ರಾಮದ ಬಳಿ ಬರುತ್ತಿದ್ದಂತೆ, ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಾರನ್ನು ಅಡ್ಡಗಟ್ಟಿದ್ದಾರೆ. “ಮೇಡಂ ಒಬ್ಬರು ನಿಮಗೆ ಗಿಫ್ಟ್ ಕಳುಹಿಸಿದ್ದಾರೆ” ಎಂದು ಹೇಳಿ ಒಂದು ಗಿಫ್ಟ್ ಬಾಕ್ಸ್ ತೋರಿಸಿದ್ದಾರೆ.
ಇದನ್ನು ನಂಬಿ ದಯಾನಂದ ರೆಡ್ಡಿ ಕಾರಿನ ಡೋರ್ ಲಾಕ್ ಓಪನ್ ಮಾಡುತ್ತಿದ್ದಂತೆ, ದುಷ್ಕರ್ಮಿಗಳು ತಕ್ಷಣವೇ ಕಾರಿನೊಳಗೆ ನುಗ್ಗಿದ್ದಾರೆ. ಡ್ರೈವರ್ ತಲೆಗೆ ಹಾಗೂ ದಯಾನಂದ ರೆಡ್ಡಿ ಅವರ ಕುತ್ತಿಗೆಗೆ ಗನ್ ಇಟ್ಟು ಕಾರು ಚಲಾಯಿಸುವಂತೆ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಕೇರಳ ನೋಂದಣಿಯ ಕೆಂಪು ಬಣ್ಣದ ಕಾರಿನಲ್ಲಿದ್ದ ಮತ್ತಿಬ್ಬರು ಆರೋಪಿಗಳು ಇವರನ್ನು ಹಿಂಬಾಲಿಸಿದ್ದಾರೆ.
“ನಿನ್ನ ಹತ್ಯೆಗೆ 10 ಕೋಟಿ ಸುಪಾರಿ!”
ಅಪಹರಣಕಾರರು ದಯಾನಂದ ರೆಡ್ಡಿ ಅವರನ್ನು ಅತ್ತಿಬೆಲೆಯ ಜಿಗಲ ಗ್ರಾಮದ ಕೆಹೆಚ್ಬಿ (KHB) ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಕಾರು ನಿಲ್ಲಿಸಿ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತನಾಡುತ್ತಾ ಭೀತಿ ಹುಟ್ಟಿಸಿದ್ದಾರೆ.”ನಿನ್ನನ್ನು ಕೊಲೆ ಮಾಡಲು 10 ಕೋಟಿ ರೂಪಾಯಿ ಸುಪಾರಿ (Contract) ಸಿಕ್ಕಿದೆ. ಆನ್ಲೈನ್ ಹಾಗೂ ವಿಕಿಪೀಡಿಯಾದಲ್ಲಿ ನಿನ್ನ ಸರ್ಚ್ ಮಾಡಿಯೇ ಸ್ಕೆಚ್ ಹಾಕಿದ್ದೇವೆ. ಟ್ರೇಡಿಂಗ್ನಲ್ಲಿ ನಮಗೆ ಭಾರಿ ನಷ್ಟವಾಗಿದ್ದು, ಸಾಲ ತೀರಿಸಲು ಈ ಕೆಲಸ ಮಾಡ್ತಿದ್ದೇವೆ” ಎಂದು ಹೆದರಿಸಿದ್ದಾರೆ.
ಜಾಣ್ಮೆಯಿಂದ ಪ್ರಾಣ ಉಳಿಸಿಕೊಂಡ ಮಾಜಿ MLC!
ದುಷ್ಕರ್ಮಿಗಳು ಕುತ್ತಿಗೆಗೆ ಗನ್ ಇಟ್ಟು ಕೊಲೆ ಮಾಡಲು ಮುಂದಾದಾಗ ದಯಾನಂದ ರೆಡ್ಡಿ ಧೃತಿಗೆಡದೆ ಜಾಣ್ಮೆ ಮೆರೆದರು. “ನಾನು ಸಮಾಜಸೇವೆ ಮಾಡುವವನು, ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ, ನನ್ನನ್ನು ಕೊಲ್ಲಬೇಡಿ. ಸುಪಾರಿ ಕೊಟ್ಟವರಿಗಿಂತ ಹೆಚ್ಚಿನ ಹಣವನ್ನು ನಾನೇ ನೀಡುತ್ತೇನೆ” ಎಂದು ಮನವಿ ಮಾಡಿಕೊಂಡರು.
ಮೊದಲು 3 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅಪಹರಣಕಾರರು, ಬಳಿಕ 2 ಕೋಟಿ ರೂ. ನೀಡುವಂತೆ ಒಪ್ಪಂದ ಮಾಡಿಕೊಂಡರು. ಆದರೆ, “ಈ ಮಧ್ಯರಾತ್ರಿಯಲ್ಲಿ ಅಷ್ಟೊಂದು ನಗದು ಹಣ ಸಿಗುವುದಿಲ್ಲ. ಬೆಳಗ್ಗೆ ಬ್ಯಾಂಕ್ಗಳು ಓಪನ್ ಆದ ತಕ್ಷಣ ಹಣ ಡ್ರಾ ಮಾಡಿ ಕೊಡುತ್ತೇನೆ” ಎಂದು ದಯಾನಂದ ರೆಡ್ಡಿ ನಂಬಿಸಿದ್ದಾರೆ. ಅವರ ಮಾತನ್ನು ನಂಬಿದ ಕಿಡ್ನ್ಯಾಪರ್ಗಳು, ತಾವೇ ಒಂದು ಮೊಬೈಲ್ ನಂಬರ್ ನೀಡಿ, ಮುಂಜಾನೆ 4:30ರ ಸುಮಾರಿಗೆ ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಕಿಡ್ನ್ಯಾಪರ್ಗಳ ಕೈಯಿಂದ ಪಾರಾದ ತಕ್ಷಣ ದಯಾನಂದ ರೆಡ್ಡಿ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರ ಸೂಚನೆಯಂತೆ ದಯಾನಂದ ರೆಡ್ಡಿ ಅವರು ಆರೋಪಿಗಳು ನೀಡಿದ್ದ ನಂಬರ್ಗೆ ಕರೆ ಮಾಡಿ, “ಹಣ ರೆಡಿಯಾಗಿದೆ, ಬನ್ನಿ” ಎಂದು ನಂಬಿಸಿದ್ದಾರೆ. ಹಣ ಪಡೆಯಲು ಬಂದ ದುಷ್ಕರ್ಮಿಗಳನ್ನು ಸಿವಿಲ್ ಉಡುಪಿನಲ್ಲಿದ್ದ ಪೊಲೀಸರು ಸಿನಿಮೀಯ ಶೈಲಿಯಲ್ಲೇ ಸುತ್ತುವರಿದು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
#DayanandaReddy #MLCKidnapped #BengaluruCrime #AttibelePolice #AnekalNews #GunpointKidnap #SupariKiller #RowdySheeter #FreedomTV #BreakingNewsKarnataka




