Mandyaರಾಜಕೀಯ

ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಸುಮಲತಾ ಪಡೆ! ರಾಜ್ಯಸಭೆ ಸ್ಥಾನಕ್ಕೆ ಗಡುವು!

BJP hanakere shashi demands RS seat to Sumalatha in Mandya

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ. ಇದರಿಂದ ಮಂಡ್ಯದ ಸ್ವಾಭಿಮಾನಿ ಪಡೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳು ಕಮಲ ಪಾಳೆಯದ ವಿರುದ್ಧ ಬಹಿರಂಗವಾಗಿಯೇ ರೊಚ್ಚಿಗೆದ್ದಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸುಮಲತಾ ಆಪ್ತ ಹನಕೆರೆ ಶಶಿ, “ಬಿಜೆಪಿ ಪಕ್ಷ ಸೇರಿ ಸುಮಲತಾ ಅಂಬರೀಶ್ ಅವರು ತಪ್ಪು ಮಾಡಿದ್ರಾ?” ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹೈಕಮಾಂಡ್ ನಾಯಕರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ರೆಬೆಲ್ ಸ್ಟಾರ್ ಪತ್ನಿಗೆ ಬಿಜೆಪಿ ನೀಡೋ ಬಹುಮಾನ ಇದೇನಾ?


, “ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದಿಂದ ದೊಡ್ಡ ಆಫರ್ ಇದ್ದರೂ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದರು. ಮಂಡ್ಯದಲ್ಲಿ ಮೈತ್ರಿಕೂಟಕ್ಕಾಗಿ (ಬಿಜೆಪಿ-ಜೆಡಿಎಸ್) ತಮ್ಮ ಹಾಲಿ ಕ್ಷೇತ್ರ ಹಾಗೂ ಟಿಕೆಟ್ ಅನ್ನು ತ್ಯಾಗ ಮಾಡಿ ನಿಜವಾದ ಸ್ವಾಭಿಮಾನಿ ಎನಿಸಿಕೊಂಡರು. ಹಳೇ ಮೈಸೂರು ಭಾಗದಲ್ಲಿ ಸುಮಲತಾ ಅವರ ಸೇರ್ಪಡೆಯಿಂದ ಬಿಜೆಪಿಗೆ ದೊಡ್ಡ ಬಲ ಬಂದಿದೆ. ಆದರೆ, ಕಳೆದ ಎರಡೂವರೆ ವರ್ಷಗಳಿಂದ ಬಿಜೆಪಿಯವರು ಅವರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ” ಎಂದು ಹನಕೆರೆ ಶಶಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಸಭಾ ಸ್ಥಾನ ನೀಡ್ಬೇಕು ಇದು ಬೇಡಿಕೆಯಲ್ಲ, ಎಚ್ಚರಿಕೆ!
ರಾಷ್ಟ್ರೀಯ ಮಟ್ಟದಲ್ಲಿ ಸುಮಲತಾ ಅವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.”ಅಂಬರೀಶ್ ಅವರು ಬದುಕಿದ್ದಾಗ ಬಿ-ಫಾರಂಗಳು ನಮ್ಮ ಮನೆಗೇ ಹುಡುಕಿಕೊಂಡು ಬರುತ್ತಿದ್ದವು. ಈಗ ಅವರ ಪತ್ನಿಗೆ ಕನಿಷ್ಠ ಒಂದು ಸ್ಥಾನಮಾನವನ್ನೂ ಕೊಟ್ಟಿಲ್ಲ. ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರಿಗೆ ಕಡ್ಡಾಯವಾಗಿ ಅವಕಾಶ ಕೊಡಲೇಬೇಕು. ಒಂದು ವೇಳೆ ಕಡೆಗಣಿಸಿದರೆ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮಂಡ್ಯದ ಸ್ವಾಭಿಮಾನಿ ಪಡೆಯ ಆಕ್ರೋಶ ಎದುರಿಸಬೇಕಾಗುತ್ತದೆ” ಎಂದು ಅಭಿಮಾನಿಗಳು ನೇರ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿಯನ್ನೇ ಕಡೆಗಣಿಸುತ್ತಿರುವ ಜೆಡಿಎಸ್?
ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕಸಿಬಿಸಿ ವಾತಾವರಣ ನಿರ್ಮಾಣವಾಗಿದೆ ಎಂದು ಆಪ್ತ ಹನಕೆರೆ ಶಶಿ ತಿಳಿಸಿದ್ದಾರೆ. ಮೈತ್ರಿ ಏರ್ಪಟ್ಟ ಬಳಿಕ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆಯಾಗುತ್ತಿದೆ. ಜಿಲ್ಲೆಯ ಯಾವುದೇ ಪ್ರಮುಖ ಸಭೆ-ಸಮಾರಂಭಗಳಿಗೆ ಜೆಡಿಎಸ್ ನಾಯಕರು ಬಿಜೆಪಿಯವರನ್ನು ಕರೆಯುತ್ತಿಲ್ಲ, ಕನಿಷ್ಠ ಗೌರವವನ್ನೂ ನೀಡುತ್ತಿಲ್ಲ ಎಂದು ಮೈತ್ರಿ ಪಕ್ಷದ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ.

ಇದೇ ವೇಳೆ ತಮ್ಮ ನಾಯಕಿ ಸುಮಲತಾ ಅಂಬರೀಶ್ ಅವರ ಮೌನ ನಡೆ ವಿರುದ್ಧವೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. “ನಮ್ಮ ನಾಯಕಿ ಸದಾ ನನಗೆ ಯಾವುದೇ ಅಧಿಕಾರ ಬೇಡ ಎಂದು ಹೇಳುತ್ತಾರೆ. ಆದರೆ, ಅವರನ್ನೇ ನಂಬಿಕೊಂಡು ರಾಜಕೀಯ ಮಾಡುತ್ತಿರುವ ನಮ್ಮ ಕಥೆ ಏನು? ನಾಯಕಿಗೆ ಸ್ಥಾನಮಾನ ಸಿಗದಿದ್ದರೆ ಕಾರ್ಯಕರ್ತರ ಭವಿಷ್ಯವೇನು?” ಎಂದು ಪ್ರಶ್ನಿಸಿದ್ದಾರೆ.
ಸಂಸದರಾಗಿ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವ ಸುಮಲತಾ ಅವರಿಗೆ ತಕ್ಷಣವೇ ಸೂಕ್ತ ರಾಜಕೀಯ ಸ್ಥಾನಮಾನ ನೀಡದಿದ್ದರೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಮೇಲಿರುವ ಗೌರವ ಸಂಪೂರ್ಣ ಕಡಿಮೆಯಾಗಲಿದೆ ಎಂದು ಸ್ವಾಭಿಮಾನಿ ಪಡೆ ಎಚ್ಚರಿಸಿದೆ.

#SumalathaAmbareesh #MandyaPolitics #AmbareeshFans #BJP #SumalathaAmbareeshFans #KarnatakaPolitics #RajyaSabhaElection #BYVijayendra #NarendraModi #AmitShah #FreedomTVKannada #BreakingNews #MandyaNews

Comments (0)

Your email address will not be published. Required fields are marked *

Back to top button