TUMKURರಾಜಕೀಯ

ಕಳ್ಳಿಪಾಳ್ಯ ರೈಲ್ವೆ ಮೇಲ್ಸೇತುವೆಗೆ ವಿ.ಸೋಮಣ್ಣ ಚಾಲನೆ!

Minister V. Somanna inaugurate Kallipalya Railway Over Bridge

ಗುಬ್ಬಿ (ತುಮಕೂರು): ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್ ಬಳಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ (ROB) ನಿರ್ಮಾಣ ಕಾಮಗಾರಿಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದ ಸಚಿವರು, ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಪಟ್ಟಣದ ರೈಲ್ವೆ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.

ರೈಲ್ವೆ ನಿಲ್ದಾಣಗಳ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ!


ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ ಅವರು ರೈಲ್ವೆ ಇಲಾಖೆಯ ಬೃಹತ್ ಯೋಜನೆಗಳ ವಿವರಗಳನ್ನು ನೀಡಿದರು. ಶ್ರೀ ಸಿದ್ಧಗಂಗಾ ಮಠದ ಹೆಸರಿನ ರೈಲ್ವೆ ನಿಲ್ದಾಣವನ್ನು ಬರೋಬ್ಬರಿ 100 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲೊಂದಾದ ಯಶವಂತಪುರ ನಿಲ್ದಾಣದ ಮೇಲ್ದರ್ಜೀಕರಣಕ್ಕೆ 380 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಬೆಂಗಳೂರು ಮತ್ತು ತುಮಕೂರು ನಡುವಿನ ಕೈಗಾರಿಕಾ ಹಾಗೂ ಆರ್ಥಿಕ ಬೆಳವಣಿಗೆಯಿಂದಾಗಿ ಮುಂದಿನ 5 ರಿಂದ 10 ವರ್ಷಗಳಲ್ಲಿ ಗುಬ್ಬಿ ತಾಲೂಕಿಗೆ ಉಜ್ವಲ ಭವಿಷ್ಯವಿದೆ. ಇದು ಅತ್ಯಂತ ವೇಗವಾಗಿ ವಿಕಾಸಗೊಳ್ಳಲಿದೆ. ಹೀಗಾಗಿ ರೈತರು ಸಾರ್ವಜನಿಕ ಸೌಲಭ್ಯಗಳ ಉದ್ದೇಶಕ್ಕೆ ಹೊರತುಪಡಿಸಿ, ತಮ್ಮ ಫಲವತ್ತಾದ ಜಮೀನುಗಳನ್ನು ಯಾರಿಗೂ ಮಾರಾಟ ಮಾಡಬೇಡಿ” ಎಂದು ಸೋಮಣ್ಣ ರೈತರಿಗೆ ಮಹತ್ವದ ಸಲಹೆ ನೀಡಿದರು.

ನಮಗೆ ಮತ ನೀಡಿ ಗೆಲ್ಲಿಸಿದ ಜನಸಾಮಾನ್ಯರ ಋಣವನ್ನು ನಾವು ಮಾಡುವ ಕೆಲಸ ಹಾಗೂ ಅಭಿವೃದ್ಧಿಯ ಮೂಲಕವೇ ತೀರಿಸಬೇಕು. ವಿಕಾಸದ ವಿಷಯ ಬಂದಾಗ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವರು ಕರೆ ನೀಡಿದರು.

ಸೋಮಣ್ಣ ಕೆಲಸಕ್ಕೆ ಶ್ರೀನಿವಾಸ್ ಪ್ರಶಂಸೆ
ಇದೇ ಸಂದರ್ಭದಲ್ಲಿ ಮಾತನಾಡಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ (ವಾಸು), ವಿ.ಸೋಮಣ್ಣ ಅವರ ವೇಗ ಹಾಗೂ ಕಾರ್ಯವೈಖರಿಯನ್ನು ಶ್ಲಾಘಿಸಿದರು. “ತುಮಕೂರು ಸಂಸದರಾದ ಬಳಿಕ ಕೇವಲ ಭಾಷಣಕ್ಕೆ ಸೀಮಿತವಾಗದೆ, ನಿಜವಾದ ಅಭಿವೃದ್ಧಿ ಕೆಲಸಗಳನ್ನು ನೆಲದ ಮೇಲೆ ತೋರಿಸಿದ ನಾಯಕ ವಿ.ಸೋಮಣ್ಣ” ಎಂದು ಕೊಂಡಾಡಿದರು. ಇದೇ ವೇಳೆ, ತಾಲೂಕಿನಲ್ಲಿ ಈಗಾಗಲೇ 135 ಚೆಕ್ ಡ್ಯಾಂಗಳು ನಿರ್ಮಾಣವಾಗಿದ್ದು, ಅಂತರ್ಜಲ ಮಟ್ಟ ವೃದ್ಧಿಸಲು ಇನ್ನು ಹೆಚ್ಚಿನ ಚೆಕ್ ಡ್ಯಾಂಗಳನ್ನು ಮಂಜೂರು ಮಾಡಲು ಜಲಶಕ್ತಿ ಸಚಿವರೂ ಆಗಿರುವ ಸೋಮಣ್ಣ ಅವರು ಕೇಂದ್ರದಿಂದ ಹೆಚ್ಚಿನ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಈ ಮಹತ್ವದ ಕಾಮಗಾರಿ ಚಾಲನಾ ಸಮಾರಂಭದಲ್ಲಿ ತಹಶೀಲ್ದಾರ್ ಆರತಿ ಬಿ., ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

#VSomanna #SRSrinivas #GubbiNews #Tumakuru #RailwayFlyover #Kallipalya #SiddagangaRailwayStation #IndianRailways #KarnatakaDevelopment #TumakuruPolitics #FreedomTVKannada #BreakingNews

Comments (0)

Your email address will not be published. Required fields are marked *

Back to top button