HUBLIರಾಜಕೀಯ

ಹಿಜಾಬ್ VS ಕೇಸರಿ ಜಟಾಪಟಿ ; ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲು ಹಂಚಿದ ಸಂಘಟನೆಗಳು!

Kesari shawls distribute in colleges

ಹುಬ್ಬಳ್ಳಿ: ರಾಜ್ಯದಲ್ಲಿ ಇಂದಿನಿಂದ ಹೊಸ ಶೈಕ್ಷಣಿಕ ವರ್ಷದ ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ, ಮೊದಲ ದಿನವೇ ಸಿಲಿಕಾನ್ ಸಿಟಿ ಸೇರಿದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ “ಹಿಜಾಬ್ ವರ್ಸಸ್ ಕೇಸರಿ” ವಿವಾದ ಮತ್ತೆ ಹೆಡೆಗೆತ್ತಿ ನಿಂತಿದೆ. ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿರುವುದನ್ನು ಖಂಡಿಸಿ, ಹುಬ್ಬಳ್ಳಿಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ಮೂಲಕ ಸರ್ಕಾರದ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮುಸ್ಲಿಂ ಓಲೈಕೆಗೆ ಹಿಂದೂ ಸಂಘಟನೆಗಳ ಸೆಡ್ಡು!


ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಳೆದ ಮೇ ತಿಂಗಳಲ್ಲಿ ಈ ಆದೇಶವನ್ನು ಬದಲಾಯಿಸಿ, ಹಿಜಾಬ್ ಧರಿಸಲು ಮತ್ತೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಸರ್ಕಾರದ ಈ ಕ್ರಮ ಹಿಂದೂ ಸಂಘಟನೆಗಳ ತೀವ್ರ ಕಣ್ಣೀರಿಗೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಲಾ-ಕಾಲೇಜುಗಳಲ್ಲಿ ಸಮಾನತೆಗಾಗಿ ಸಮವಸ್ತ್ರ ನಿಯಮವಿದೆ, ಆದರೆ ಕಾಂಗ್ರೆಸ್ ಸರ್ಕಾರ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಜಾಬ್‌ಗೆ ಅನುಮತಿ ನೀಡಿದೆ ಎಂದು ಸಂಘಟನೆಗಳು ಆರೋಪಿಸಿದ್ದವು. ಸರ್ಕಾರ ಈ ಆದೇಶವನ್ನು ಹಿಂಪಡೆಯದಿದ್ದರೆ ‘ಕೇಸರಿ ಶಾಲು ಅಭಿಯಾನ’ ಮಾಡುವುದಾಗಿ ನೀಡಿದ್ದ ಎಚ್ಚರಿಕೆಗೆ ಸರ್ಕಾರ ಜಗ್ಗದಿದ್ದಾಗ, ಇಂದು ಕಾಲೇಜು ಆರಂಭದ ಮೊದಲ ದಿನವೇ ಹಿಂದೂ ಕಾರ್ಯಕರ್ತರು ಹುಬ್ಬಳ್ಳಿಯ ಕನಕದಾಸ ಕಾಲೇಜು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಮುಂದೆ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿ ಸರ್ಕಾರದ ವಿರುದ್ಧ ಸೆಡ್ಡು ಹೊಡೆದರು.
“ಶಾಲಾ-ಕಾಲೇಜುಗಳಲ್ಲಿ ಸಮಾನತೆ ಇರಬೇಕು. ಸರ್ಕಾರ ತಕ್ಷಣವೇ ಹಿಜಾಬ್‌ಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ಕೇಸರಿ ಶಾಲು ವಿತರಣೆ ಅಭಿಯಾನ ರಾಜ್ಯಾದ್ಯಂತ ನಿರಂತರವಾಗಿ ನಡೆಯಲಿದೆ.” ಎಂದು ರಘು ಯಲ್ಲಕ್ಕನವರ್, ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.


ಕಾಲೇಜುಗಳ ಮುಂದೆ ಬಿಗಿ ಪೊಲೀಸ್ ಭದ್ರತೆ
ಹಿಂದೂ ಸಂಘಟನೆಗಳು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಪೊಲೀಸರು, ನಗರದ ಮಹಿಳಾ ವಿದ್ಯಾಪೀಠ ಹಾಗೂ ಕನಕದಾಸ ಕಾಲೇಜು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳ ಮುಂದೆ ಬಿಗಿ ಪೊಲೀಸ್ ಭದ್ರತೆ ಕೈಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾರಿಗೂ ಒತ್ತಾಯಪೂರ್ವಕವಾಗಿ ಕೇಸರಿ ಶಾಲು ಧರಿಸದಂತೆ ಪೊಲೀಸರು ಸ್ಥಳದಲ್ಲೇ ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೇಸರಿ ಶಾಲು ಪಡೆದ ವಿದ್ಯಾರ್ಥಿನಿಯರು: ಕಾಲೇಜಿನ ಪ್ರವೇಶ ದ್ವಾರದಲ್ಲಿ ಕೆಲವು ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ಬಂದು ಸ್ವಯಂಪ್ರೇರಿತರಾಗಿ ಕೇಸರಿ ಶಾಲುಗಳನ್ನು ಪಡೆದುಕೊಂಡಿದ್ದು ಹಿಂದೂ ಸಂಘಟನೆಗಳ ಉತ್ಸಾಹ ಹೆಚ್ಚಿಸಿತ್ತು. ಇದೇ ವೇಳೆ ಕೆಲವು ಅನ್ಯಧರ್ಮೀಯ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ನಿರಾಕರಿಸಿದ ಘಟನೆಗಳೂ ನಡೆದವು. ಆದರೆ, ಕಾರ್ಯಕರ್ತರು ಯಾರ ಮೇಲೂ ಒತ್ತಡ ಹೇರದೆ ಶಾಂತಿಯುತವಾಗಿ ಸಂಯಮ ಕಾಪಾಡಿಕೊಂಡರು.

ಒಟ್ಟಿನಲ್ಲಿ, ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಗಂಟೆ ಬಾರಿಸುತ್ತಿದ್ದಂತೆ ಮತ್ತೆ ಹಿಜಾಬ್ ಮತ್ತು ಕೇಸರಿ ವಿವಾದ ಮುಂಚೂಣಿಗೆ ಬಂದಿದೆ. ಸರ್ಕಾರ ಈ ವಿಚಾರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಕಾದು ನೋಡಬೇಕಿದೆ. ಆದರೆ, ಜ್ಞಾನಾರ್ಜನೆ ಮಾಡಬೇಕಾದ ವಿದ್ಯಾ ಮಂದಿರಗಳಲ್ಲಿ ಮತ್ತೆ ಇಂತಹ ಧಾರ್ಮಿಕ ಸಂಘರ್ಷಗಳು ತಲೆದೂರಿರುವುದು ಪೋಷಕರಲ್ಲಿ ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ತೀವ್ರ ಬೇಸರ ಮತ್ತು ಕಳವಳ ಮೂಡಿಸಿರುವುದಂತೂ ಸುಳ್ಳಲ್ಲ.

#FreedomTV #HijabVsSaffron #Hubballi #KanakadasaCollege #KarnatakaPolitics #HijabRow2026 #SaffronScarfCampaign #RaghuYallakkanavar #HubliPolice #UniformEquality #SchoolReopening #CongressGovt #BreakingNewsಕನ್ನಡ

Comments (0)

Your email address will not be published. Required fields are marked *

Back to top button