
ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ವೈರಲ್ ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಪೂರ್ಣವಾಗಿ ನಕಲಿ. ನನ್ನ ಧ್ವನಿಯನ್ನು ದುರುಪಯೋಗಪಡಿಸಿಕೊಂಡು ಎಐ (AI – ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ಇದನ್ನು ಸೃಷ್ಟಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಮೀರ್, ವಿರೋಧಿಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ರಾಜಕೀಯ ಷಡ್ಯಂತ್ರ ; ಜಮೀರ್ ಆಕ್ರೋಶ
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಜಮೀರ್ ಅಹಮದ್ ಖಾನ್, ಈ ಆಡಿಯೋ ಹಿಂದೆ ದೊಡ್ಡ ರಾಜಕೀಯ ಪಿತೂರಿ ಅಡಗಿದೆ ಎಂದಿದ್ದಾರೆ.ಸೈಬರ್ ಠಾಣೆಗೆ ದೂರು: ನನ್ನ ಹೆಸರಿಗೆ ಮಸಿ ಬಳಿಯಲು ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ಆ ರೀತಿಯಾಗಿ ಎಲ್ಲೂ ಮಾತನಾಡಿಲ್ಲ. ಪಕ್ಷದಲ್ಲಿ ಮತ್ತು ಸಾರ್ವಜನಿಕರಲ್ಲಿ ಗೊಂದಲ ಉಂಟು ಮಾಡಲು ಈ ಕೃತ್ಯ ಎಸಗಲಾಗಿದೆ, ಇದನ್ನು ಯಾರೂ ನಂಬಬಾರದು. ಈ ಆಡಿಯೋ ನಕಲಿ ಎಂಬುದು ನನಗೆ ಗೊತ್ತು. ಹಾಗಾಗಿ ಸರ್ಕಾರ ಅಥವಾ ಪಕ್ಷ ಈ ಕುರಿತು ಯಾವ ತನಿಖೆ ಬೇಕಾದರೂ ನಡೆಸಲಿ, ನಾನು ಯಾವುದೇ ತನಿಖೆಗೂ ಒಳಪಡಲು ಸಿದ್ಧನಿದ್ದೇನೆ.
“ಯಾರೋ ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ ನನ್ನ ಧ್ವನಿಯನ್ನು ನಕಲು ಮಾಡಿದ್ದಾರೆ. ಈ ರಾಜಕೀಯ ಷಡ್ಯಂತ್ರದ ವಿರುದ್ಧ ನಾನು ಸೈಬರ್ ಪೊಲೀಸರಿಗೆ ದೂರು ನೀಡುತ್ತಿದ್ದೇನೆ.” ಎಂದು ಜಮೀರ್ ಅಹಮದ್ ಖಾನ್ ಹೇಳಿದರು
.
ಸಾಮಾಜಿಕ ಜಾಲತಾಣದ ‘ಎಕ್ಸ್’ ಖಾತೆಯಲ್ಲಿ ‘ಕಾಕ್ರೋಚ್ ಪಾರ್ಟಿ’ ಎಂಬ ಪೇಜ್ನಿಂದ ಆಡಿಯೋವೊಂದು ಲೀಕ್ ಆಗಿತ್ತು. ಅದರಲ್ಲಿ ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮದ್ ಮಾತನಾಡಿದ್ದಾರೆ ಎಂದು ಬಿಂಬಿಸಲಾಗಿತ್ತು. ಉಪಚುನಾವಣೆಯಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಬೀಳದಂತೆ ತಡೆದು, ಪಕ್ಷೇತರ (ಕುಕ್ಕರ್ ಗುರುತು) ಹಾಗೂ ಎಸ್ಡಿಪಿಐ ಅಭ್ಯರ್ಥಿಗೆ ಮತ ಹಾಕಿಸುವಂತೆ ಜಮೀರ್ ಸೂಚನೆ ನೀಡಿದ್ದಾರೆ ಎಂಬ ಸಂಭಾಷಣೆ ಆಡಿಯೋದಲ್ಲಿದೆ ಎಂದು ಆರೋಪಿಸಲಾಗಿತ್ತು. ಇದು ಕಾಂಗ್ರೆಸ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ, ಇದೀಗ ಜಮೀರ್ ಅಹಮದ್ ಅವರು ಇದನ್ನು ‘ಡಿಜಿಟಲ್ ವಂಚನೆ’ ಮತ್ತು ‘ನಕಲಿ ಆಡಿಯೋ’ ಎಂದು ಕರೆದು ತನಿಖೆಗೆ ಸವಾಲು ಹಾಕಿರುವುದರಿಂದ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.
#FreedomTV #ZameerAhmedKhan #ZameerAudioControversy #AIAudio #FakeAudio #CyberCrime #DavanagereSouthByElection #CongressPolitics #ZameerZallange #KarnatakaPolitics #FakeNewsAlert #PoliticalConspiracy #BreakingNewsಕನ್ನಡ




