ವಿಶ್ವ ಪರ್ಯಟನೆಗೆ ಹೊರಟ 60ರ ಪ್ರಾಯದ ಬೈಕ್ ರೈಡರ್!
60 years old sharath goes to world tour by Bullet bike

ಮಂಗಳೂರು: ಸಾಹಸಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮಂಗಳೂರಿನ 60 ವರ್ಷದ ಹಿರಿಯ ಬೈಕ್ ರೈಡರ್ ಒಬ್ಬರು ಅಕ್ಷರಶಃ ಸಾಬೀತುಪಡಿಸಲು ಹೊರಟಿದ್ದಾರೆ. ಹೌದು, ಕರಾವಳಿಯ ಹೆಮ್ಮೆಯ ಉದ್ಯಮಿ, ಬೈಕ್ ರೈಡರ್ ಶರತ್ ಎಕ್ಕೂರು ಅವರು ತಮ್ಮ 60ನೇ ವಯಸ್ಸಿನಲ್ಲಿ ಬರೋಬ್ಬರಿ 38 ಯುರೋಪಿಯನ್ ಹಾಗೂ ಗಲ್ಫ್ ದೇಶಗಳಿಗೆ ಬೈಕ್ ಮೂಲಕವೇ ಪ್ರವಾಸ ಕೈಗೊಳ್ಳಲು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಹಸದ ರೋಡ್ ಮ್ಯಾಪ್ ಸಿದ್ಧಪಡಿಸಿದ್ದಾರೆ.

ಮೇ 31 ರಿಂದ ಮಂಗಳೂರಿನಿಂದ ವಿಶ್ವ ಪರ್ಯಟನೆ ಆರಂಭ!
ಶರತ್ ಎಕ್ಕೂರು ಅವರು ತಮ್ಮ ನೆಚ್ಚಿನ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650 ಬೈಕ್‌ನಲ್ಲಿ ಮೇ 31ರ ಭಾನುವಾರ ಮುಂಜಾನೆ ಮಂಗಳೂರಿನ ಐತಿಹಾಸಿಕ ಶಾಂತಿ ಕೆಥಡ್ರಿಯಲ್ ಚರ್ಚ್ ಮುಂಭಾಗದಿಂದ ತಮ್ಮ ಎರಡನೇ ಅಂತಾರಾಷ್ಟ್ರೀಯ ಬೈಕ್ ಸವಾರಿಯನ್ನು ಆರಂಭಿಸಲಿದ್ದಾರೆ. ಮಂಗಳೂರಿನಿಂದ ಹೊರಡುವ ಇವರು ಬೆಂಗಳೂರು, ಹೈದರಾಬಾದ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದ ಮೂಲಕ ಮೊದಲು ನೇಪಾಳ ಪ್ರವೇಶಿಸಲಿದ್ದಾರೆ. ಅಲ್ಲಿಂದ ಟಿಬೆಟ್, ಚೀನಾ, ಕಜಕಿಸ್ತಾನ್, ರಷ್ಯಾ, ಇರಾನ್, ಇರಾಕ್, ಸೌದಿ ಅರೇಬಿಯಾ ಸೇರಿದಂತೆ ಯುರೋಪ್ ಖಂಡದ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಟ್ಜರ್ಲ್ಯಾಂಡ್, ನಾರ್ವೆ ಸೇರಿದಂತೆ ಒಟ್ಟು 38 ದೇಶಗಳ ಪ್ರವಾಸಿ ತಾಣಗಳಲ್ಲಿ ಸುತ್ತಾಡಲಿದ್ದಾರೆ.
ನಿತ್ಯ 500 ಕಿಲೋಮೀಟರ್ ಪಯಣ!
ಮುಂದಿನ 5 ರಿಂದ 6 ತಿಂಗಳ ಕಾಲ ನಿರಂತರವಾಗಿ ಸಾಗಲಿರುವ ಈ ಮಹಾ ಪ್ರವಾಸದಲ್ಲಿ ಶರತ್ ಅವರು ಪ್ರತಿದಿನ ಸರಾಸರಿ 500 ಕಿಲೋಮೀಟರ್ ಬೈಕ್ ಚಲಾಯಿಸುವ ಗುರಿ ಹೊಂದಿದ್ದಾರೆ. ಇಡೀ ಟ್ರಿಪ್‌ನಲ್ಲಿ ಅವರು ಬರೋಬ್ಬರಿ 35 ರಿಂದ 40 ಸಾವಿರ ಕಿಲೋಮೀಟರ್ ದೂರವನ್ನು ಬುಲೆಟ್ ಮೂಲಕವೇ ಕ್ರಮಿಸಲಿದ್ದಾರೆ. ವಿಶೇಷವೇನೆಂದರೆ, ಶರತ್ ಅವರು ತಮ್ಮ ಬೈಕ್‌ನಲ್ಲಿ ಭಾರತದ ತ್ರಿವರ್ಣ ಧ್ವಜದೊಂದಿಗೆ ನಮ್ಮ ಹೆಮ್ಮೆಯ ತುಳುನಾಡಿನ ಧ್ವಜವನ್ನು ಹೊತ್ತು ಜಗತ್ತಿನಾದ್ಯಂತ ಸಂಚರಿಸಲಿದ್ದಾರೆ. ಚೀನಾದಲ್ಲಿ ಸ್ಥಳೀಯ ಟೂರ್ ಗೈಡ್ ನೆರವು ಪಡೆಯಲಿರುವ ಶರತ್, ಸಾಧ್ಯವಾದರೆ ಅಫ್ಘಾನಿಸ್ತಾನಕ್ಕೂ ಭೇಟಿ ನೀಡಿ, ಕೊನೆಗೆ ಒಮನ್ ದೇಶದಲ್ಲಿ ತಮ್ಮ ಪ್ರವಾಸ ಮುಗಿಸಲಿದ್ದಾರೆ. ಅಲ್ಲಿಂದ ಹಡಗಿನ ಮೂಲಕ ಬೈಕ್ ಸಮೇತ ಭಾರತಕ್ಕೆ ಮರಳಲಿದ್ದಾರೆ.
ಗಲ್ಫ್ ರಾಷ್ಟ್ರಗಳ ಸವಾರಿ ಮಾಡಿದ್ದ ಅನುಭವ!
ಶರತ್ ಎಕ್ಕೂರು ಅವರಿಗೆ ಇಂತಹ ಅಂತಾರಾಷ್ಟ್ರೀಯ ಲಾಂಗ್ ರೈಡಿಂಗ್ ಹೊಸದೇನಲ್ಲ. ಈ ಹಿಂದೆ 2024 ರಲ್ಲೂ ಮಂಗಳೂರಿನಿಂದ ಗಲ್ಫ್ ದೇಶಗಳಿಗೆ ಬುಲೆಟ್ ಬೈಕ್‌ನಲ್ಲೇ ಯಶಸ್ವಿಯಾಗಿ ಪ್ರವಾಸ ಮಾಡಿದ್ದರು. ಅಂದು ಮುಂಬೈನಿಂದ ದುಬೈಗೆ ಬೈಕನ್ನು ಹಡಗಿನಲ್ಲಿ ಶಿಫ್ಟ್ ಮಾಡಿ, ಅಲ್ಲಿಂದ ಮುಂದೆ “ಸೇ ನೋ ಟು ಡ್ರಗ್ಸ್” (Say No To Drugs) ಮಾದಕ ದ್ರವ್ಯ ಮುಕ್ತ ಸಮಾಜದ ಜಾಗೃತಿ ಸಂದೇಶದೊಂದಿಗೆ ರೈಡ್ ಮಾಡಿದ್ದರು. ಈಗ 60ರ ಹರೆಯದಲ್ಲೂ ಯುವಕರಿಗೂ ಮಿಗಿಲಾದ ಜೋಶ್ ತೋರ್ಪಡಿಸುತ್ತಾ, ಜಗತ್ತನ್ನು ಸುತ್ತಲು ಹೊರಟಿರುವ ಕರಾವಳಿಯ ಈ ಸಾಹಸಿ ಹಿರಿಯ ರೈಡರ್‌ಗೆ ಇಡೀ ಕರ್ನಾಟಕವೇ ಹೆಮ್ಮೆಯಿಂದ ಶುಭ ಹಾರೈಸುತ್ತಿದೆ.
#FreedomTV #SharathEkkoor #MangaluruRider #RoyalEnfield #SuperMeteor650 #WorldBikeTour #CoastalKarnataka #KudlaRider #BulletRider #AdventureLife #InternationalBikeRide #TulunaduPride #60AndRiding #InspirationalIndians #MangaloreNews #BreakingNews #TrendingKannada