
ಮಂಗಳೂರು: ಇತ್ತೀಚೆಗೆ ಇಡೀ ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ವಿಡಂಬನಾತ್ಮಕ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕುರಿತಾಗಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. “ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವ್ಯರ್ಥ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇಂತಹ ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಕಾಲ ಇದಲ್ಲ” ಎಂದು ಅವರು ಲೇವಡಿ ಮಾಡಿದ್ದಾರೆ.
ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಎರಡು ದಿನಗಳ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿನ್ನ ಅಡವಿಡೋ ಕಾಲ ಹೋಗಿ ಸಾಲ ಕೊಡೋ ಕಾಲ ಬಂದಿದೆ!
ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತದ ಸಾಧನೆಗಳನ್ನು ಕೊಂಡಾಡಿದ ಸಂಸದ ಕೋಟ, “ಒಂದು ಕಾಲದಲ್ಲಿ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿ, ಸಾಲ ತೀರಿಸಲಾಗದೆ ಭಾರತದ ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟ ಇತಿಹಾಸವಿತ್ತು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ನಾಯಕತ್ವದಲ್ಲಿ ಭಾರತ ಬಲಿಷ್ಠವಾಗಿ ಬೆಳೆದಿದ್ದು, ಜಗತ್ತಿನ ಸುಮಾರು 60 ರಾಷ್ಟ್ರಗಳಿಗೆ ಸಾಲ ನೀಡುವಷ್ಟು ಆರ್ಥಿಕವಾಗಿ ಸದೃಢವಾಗಿದೆ” ಎಂದು ಹೆಮ್ಮೆಯಿಂದ ನುಡಿದರು.ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಗಂಭೀರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸುಮಾರು 1.5 ಲಕ್ಷ ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವಿಲ್ಲದೆ ಪರದಾಡುತ್ತಿದ್ದಾರೆ. ಕೆಲವರಂತೂ ಶಾಲೆಗಳನ್ನೇ ಬಿಟ್ಟಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದ ರೂ. 60 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಸೇರಿದಂತೆ ಬೇರೆ ಉದ್ದೇಶಗಳಿಗೆ ರಾಜ್ಯ ಸರ್ಕಾರ ಕಾನೂನುಬಾಹಿರವಾಗಿ ಬಳಸಿಕೊಂಡಿದೆ.
ಕಡಲ ಮೀನುಗಾರಿಕೆ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರ ರೂ. 22 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ತನ್ನದೇ ಎಂದು ಬಿಂಬಿಸಿಕೊಳ್ಳುತ್ತಿದೆ. ಈ ಸತ್ಯವನ್ನು ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ರಾರಾಜಿಸಲಿದೆ – ಸಂಸದ ಬ್ರಿಜೇಶ್ ಚೌಟ
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮತ್ತೊಬ್ಬ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, 2014ರ ಬಳಿಕ ಇಡೀ ಭಾರತದ ಚಿತ್ರಣವೇ ಬದಲಾಗಿದೆ ಎಂದರು. ಜನರ ಪ್ರತಿಯೊಂದು ಸಮಸ್ಯೆಗಳಿಗೂ ಬಿಜೆಪಿ ಪರಿಹಾರವಾಗಿ ನಿಂತಿದೆ. ಹಿಂದೆ ಕಮಲ ಅರಳಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದ್ದ ಪಶ್ಚಿಮ ಬಂಗಾಳದಲ್ಲೂ ಇಂದು ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಕಾರ್ಯಕರ್ತರ ಶ್ರಮದ ಫಲವಾಗಿ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿರುವ ‘ಕಾಕ್ರೋಚ್ ಪಾರ್ಟಿ’ ವಿವಾದಕ್ಕೆ ಕರಾವಳಿ ನೆಲದಿಂದಲೇ ಬಿಜೆಪಿ ನಾಯಕರು ಟಾಂಗ್ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
#KotaSrinivasPoojary #BrijeshChowta #CockroachJanta Party #CJPControversy #Mangaluru #BJP #DakshinaKannada #KarnatakaPolitics #CentralFunds #FreedomTVKannada #BreakingNews #MangaluruNews




