ನೌಕಾಪಡೆಯ 48ನೇ ಉಪಮುಖ್ಯಸ್ಥ – ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್
Admiral Ajay Kochchar navy vicechairman

ನವದೆಹಲಿ: ಭಾರತೀಯ ನೌಕಾಸೇನೆಯಲ್ಲಿ (Indian Navy) ಅತ್ಯಂತ ಪ್ರಮುಖ ನೇಮಕಾತಿ ನಡೆದಿದೆ. ದೇಶದ ರಕ್ಷಣಾ ವಲಯದಲ್ಲಿ ಮುಂಚೂಣಿ ಯುದ್ಧ ಸನ್ನದ್ಧತೆಯ ಅಪಾರ ಅನುಭವ ಹೊಂದಿರುವ ಮತ್ತು ‘ಆಪರೇಷನ್ ಸಿಂಧೂರ್’ (Operation Sindoor) ಕಾರ್ಯಾಚರಣೆಯ ಪ್ರಮುಖ ತಜ್ಞರಾಗಿರುವ ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ ಅವರು ಇಂದು ಶುಕ್ರವಾರ ಭಾರತೀಯ ನೌಕಾಸೇನೆಯ 48ನೇ ಉಪಮುಖ್ಯಸ್ಥರಾಗಿ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ನೌಕಾಸೇನೆಯ ಈ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಮುನ್ನ, ಅಜಯ್ ಕೊಚ್ಚರ್ ಅವರು ದೇಶದ ಏಕೈಕ ಜಂಟಿ ಮೂರು ಸೇವೆಗಳ ಥಿಯೇಟರ್ ಕಮಾಂಡ್ ಆದ ‘ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್’ ನ ಕಮಾಂಡರ್-ಇನ್-ಚೀಫ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಇವರು ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್ ಅವರ ಉತ್ತರಾಧಿಕಾರಿಯಾಗಿದ್ದು, ನಿರ್ಗಮಿತ ವತ್ಸಾಯನ್ ಅವರು ಪಶ್ಚಿಮ ನೌಕಾ ಕಮಾಂಡ್ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
37 ವರ್ಷಗಳ ನಿರಂತರ ದೇಶಸೇವೆ
ಪುಣೆಯ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಳೆಯ ವಿದ್ಯಾರ್ಥಿಯಾದ ಅಜಯ್ ಕೊಚ್ಚರ್ ಅವರು ಜುಲೈ 1, 1988 ರಂದು ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಂಡಿದ್ದರು. ಗನ್ನರಿ ಮತ್ತು ಕ್ಷಿಪಣಿ ವ್ಯವಸ್ಥೆಗಳ ತಜ್ಞರಾಗಿರುವ ಇವರು ಕಳೆದ 37 ವರ್ಷಗಳಿಗೂ ಹೆಚ್ಚು ಕಾಲ ದೇಶದ ಕಡಲ ಗಡಿಕಾಯುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಐಎನ್ಎಸ್ ನಾಶಕ್, ವಿಭೂತಿ, ಕಿರ್ಪಾನ್ ಮತ್ತು ಅತ್ಯಾಧುನಿಕ ಯುದ್ಧನೌಕೆ ‘ತ್ರಿಕಾಂಡ್’ ಗಳ ಕಮಾಂಡಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಹೆಮ್ಮೆಯ ಬೃಹತ್ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ (INS Vikramaditya) ದ ಕಮಾಂಡರ್ ಆಗಿಯೂ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಭದ್ರತಾ ತಜ್ಞರಾಗಿದ್ದಾರೆ.
ಆಪರೇಷನ್ ಸಿಂಧೂರ್ ಚಾಣಕ್ಯ
ವೈಸ್ ಅಡ್ಮಿರಲ್ ಅಜಯ್ ಕೊಚ್ಚರ್ ಅವರು ಪಶ್ಚಿಮ ನೌಕಾ ಕಮಾಂಡ್ನ ಚೀಫ್ ಆಫ್ ಸ್ಟಾಫ್ ಆಗಿದ್ದ ಅವಧಿಯಲ್ಲಿ, ಪಶ್ಚಿಮ ಕಡಲ ತೀರದಲ್ಲಿ ಎದುರಾದ ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದ್ದರು. ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ನೌಕಾಪಡೆಯ ಪ್ರಮುಖ ಯುದ್ಧೋಪಕರಣಗಳನ್ನು ಮುಂಚೂಣಿಗೆ ಅತ್ಯಂತ ವೇಗವಾಗಿ ನಿಯೋಜಿಸುವಲ್ಲಿ ಇವರು ವಹಿಸಿದ ಜಾಣ್ಮೆ ದೇಶದ ರಕ್ಷಣಾ ಇತಿಹಾಸದಲ್ಲೇ ಮಹತ್ವದ್ದಾಗಿದೆ.
ಅತ್ಯುನ್ನತ ‘ಪರಮ ವಿಶಿಷ್ಟ ಸೇವಾ ಪದಕ’ದ ಗೌರವ
ಅಜಯ್ ಕೊಚ್ಚರ್ ಅವರ ಅಪ್ರತಿಮ ನಾಯಕತ್ವ ಮತ್ತು ದೇಶಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಇವರಿಗೆ 2022 ರಲ್ಲಿ ‘ಅತಿ ವಿಶಿಷ್ಟ ಸೇವಾ ಪದಕ’ ಮತ್ತು ಇದೀಗ 2026 ರಲ್ಲಿ ರಕ್ಷಣಾ ವಲಯದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪರಮ ವಿಶಿಷ್ಟ ಸೇವಾ ಪದಕ’ ನೀಡಿ ಗೌರವಿಸಿದೆ. ದೇಶದ ರಕ್ಷಣೆ, ನೌಕಾ ತರಬೇತಿ ಮೂಲಸೌಕರ್ಯಗಳ ಆಧುನೀಕರಣ ಹಾಗೂ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ನಡುವಿನ ಜಂಟಿ ಸಮನ್ವಯತೆಯನ್ನು ಹೆಚ್ಚಿಸುವಲ್ಲಿ ಇವರು ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದು ಭಾರತೀಯ ನೌಕಾಸೇನೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ಗೌರವಪೂರ್ವಕವಾಗಿ ತಿಳಿಸಿದೆ.
#FreedomTV #IndianNavy #ViceAdmiralAjayKochhar #ViceChiefOfNavy #DefenseNews #OperationSindoor #INSVikramaditya #IndianArmedForces #PVSM #AVSM




