DHARWADರಾಜಕೀಯ

ಡಿಕೆಶಿ ನೂತನ CM- ಸಚಿವ ಸ್ಥಾನಕ್ಕೆ ಲಾಬಿಯೋ ಲಾಬಿ!

Ministership lobby in Dharwad district by leaders in DKS govt

ಧಾರವಾಡ: ಕಳೆದ ಆರು ತಿಂಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಖ್ಯಮಂತ್ರಿ ಕುರ್ಚಿ ಗುದ್ದಾಟಕ್ಕೆ ಇಂದು ಅಧಿಕೃತ ತೆರೆಬಿದ್ದಿದೆ. ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಮಹತ್ವದ ಉಪಹಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಾವು ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ, ಎರಡನೇ ಅವಧಿಗೆ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿರುವ ಡಿ.ಕೆ.ಶಿವಕುಮಾರ್ ಅವರ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಧಾರವಾಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಭರ್ಜರಿ ಕಸರತ್ತು ಆರಂಭಿಸಿದ್ದಾರೆ.

ಸಂತೋಷ್ ಲಾಡ್ ಸಚಿವ ಸ್ಥಾನಕ್ಕೆ ಕುತ್ತು!


ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ ಎರಡನೇ ಬಾರಿಗೆ ಸಂತೋಷ್ ಲಾಡ್ ಸಚಿವರಾಗಿ ಮೂರು ವರ್ಷ ಪೂರೈಸಿದ್ದಾರೆ. ಆದರೆ, ಈಗ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪರ್ವ ಶುರುವಾಗಿರುವುದರಿಂದ, ಸಂತೋಷ್ ಲಾಡ್ ಅವರ ರಾಜೀನಾಮೆ ಪಡೆದು ಧಾರವಾಡದ ಹೊಸ ಮುಖಗಳಿಗೆ ಡಿಕೆಶಿ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಲಾಗುತ್ತದೆಯೇ ಎಂಬ ಕುತೂಹಲಕಾರಿ ಚರ್ಚೆ ಜಿಲ್ಲಾ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಧಾರವಾಡ ಜಿಲ್ಲೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಮೂವರು ಶಾಸಕರು ಹಾಗೂ ಪರಿಷತ್ ಸದಸ್ಯರು ರೇಸ್‌ನಲ್ಲಿದ್ದು, ತಮ್ಮದೇ ಆದ ಜಾತಿ ಮತ್ತು ಪ್ರಭಾವದ ದಾಳ ಉರುಳಿಸುತ್ತಿದ್ದಾರೆ.

ಪ್ರಸಾದ್ ಅಬ್ಬಯ್ಯ (ಎಸ್ಸಿ ಕೋಟಾ)- ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಪ್ರಸಾದ್ ಅಬ್ಬಯ್ಯ ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದು, ಎಸ್ಸಿ ಕೋಟಾದಡಿ ತಮಗೆ ಮಂತ್ರಿ ಸ್ಥಾನ ಸಿಗಬೇಕೆಂದು ಪ್ರಬಲ ಹಕ್ಕು ಮಂಡಿಸುತ್ತಿದ್ದಾರೆ.

ಎಫ್.ಎಚ್. ಜಕ್ಕಪ್ಪನವರ (ಎಸ್ಸಿ ಕೋಟಾ) -ವಿಧಾನ ಪರಿಷತ್ ಸದಸ್ಯರಾದ ಜಕ್ಕಪ್ಪನವರು ರಾಷ್ಟ್ರೀಯ ಹಾಗೂ ರಾಜ್ಯ ನಾಯಕರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು ಪ್ರಸಾದ್ ಅಬ್ಬಯ್ಯ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಎನ್.ಎಚ್. ಕೋನರೆಡ್ಡಿ (ರೆಡ್ಡಿ ಸಮುದಾಯ) – ನವಲಗುಂದ ಶಾಸಕ ಕೋನರೆಡ್ಡಿ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೊಂದಿಗೂ ಉತ್ತಮ ಸಂಬಂಧ ಹೊಂದಿದ್ದು, ಉತ್ತರ ಕರ್ನಾಟಕದಲ್ಲಿ ರೆಡ್ಡಿ ಸಮುದಾಯದ ಪ್ರಾತಿನಿಧ್ಯದ ಆಧಾರದ ಮೇಲೆ ಮಂತ್ರಿ ಪಟ್ಟಕ್ಕಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಸಲೀಂ ಅಹ್ಮದ್ (ಅಲ್ಪಸಂಖ್ಯಾತ ಕೋಟಾ) -ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಹಿರಿಯ ಪರಿಷತ್ ಸದಸ್ಯರಾಗಿರುವ ಸಲೀಂ ಅಹ್ಮದ್ ಅವರು ಅಲ್ಪಸಂಖ್ಯಾತರ ಕೋಟಾದಡಿ ಡಿಕೆಶಿ ಕ್ಯಾಬಿನೆಟ್ ಸೇರಲು ಹೈಕಮಾಂಡ್ ಮಟ್ಟದಲ್ಲಿ ಭಾರಿ ಲಾಬಿ ನಡೆಸುತ್ತಿದ್ದಾರೆ.

ಯಾರಿಗೆ ಒಲಿಯಲಿದೆ ಸಚಿವ ಸ್ಥಾನ!
ಧಾರವಾಡ ಜಿಲ್ಲೆಯ ಈ ನಾಲ್ವರು ಪ್ರಭಾವಿ ನಾಯಕರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ? ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವಲ್ಲಿ ಡಿಕೆಶಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಯಾರ ಕೈ ಹಿಡಿಯುತ್ತದೆ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ. ಅಥವಾ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ, ಹಾಲಿ ಸಚಿವ ಸಂತೋಷ್ ಲಾಡ್ ಅವರಿಗೇ ಮೂರನೇ ಬಾರಿಗೆ ಅದೃಷ್ಟ ಒಲಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

#FreedomTV #DharwadPolitics #DKSCabinet #KarnatakaPolitics #PrasadAbbayya #NHKonareddy #SalimAhmed #FHJakkappanavar #SanthoshLad #CongressCabinet #CabinetLobby #HubliDharwad #PowerShiftKarnataka #BreakingNewsKarnataka #ಕನ್ನಡಸುದ್ದಿ #ಧಾರವಾಡ_ರಾಜಕಾರಣ

Comments (0)

Your email address will not be published. Required fields are marked *

Back to top button