
ಬೆಂಗಳೂರು: ಕರ್ನಾಟಕದ ರಾಜಕೀಯ ಅಖಾಡದಲ್ಲಿ ಕ್ಷಣಕ್ಷಣಕ್ಕೂ ಮಹತ್ವದ ವಿದ್ಯಮಾನಗಳು ಜರುಗುತ್ತಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರು ಬಹುತೇಕ ಅಂತಿಮಗೊಂಡಿದೆ.ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ದಿಢೀರ್ ಬೆಳವಣಿಗೆಗಳು ರಾಜ್ಯ ಕೈ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದ್ದು ಡಿಕೆ ಶಿವಕುಮಾರ್ ಗದ್ದುಗೆ ಏರಲಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ!
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಸೂಚನೆಗೆ ಮಣಿದು ಹುದ್ದೆಯಿಂದ ಕೆಳಗಿಳಿಯಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ನಾಯಕತ್ವ ಬದಲಾವಣೆ ಪ್ರಕ್ರಿಯೆ ಚುರುಕುಗೊಂಡಿದೆ. ರಾಜ್ಯದ ನಾಯಕತ್ವ ವಹಿಸಿಕೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಸ್ತಾಪ ಇಡಲಾಗಿತ್ತಾದರೂ, ವಯಸ್ಸು ಮತ್ತು ಆರೋಗ್ಯದ ಕಾರಣ ನೀಡಿ ಅವರು ಈ ಜವಾಬ್ದಾರಿಯನ್ನು ನಿರಾಕರಿಸಿದ್ದಾರೆ .೨೦೨೩ರ ಚುನಾವಣೆಯ ಬಳಿಕ ಮಾಡಿಕೊಳ್ಳಲಾಗಿದ್ದ ‘ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ’ ಸೂತ್ರದ ಭರವಸೆಯನ್ನು ಈಡೇರಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಡಿ.ಕೆ. ಶಿವಕುಮಾರ್ ಪರ ನಿಂತಿದ್ದು ಡಿಕೆಶಿಗೆ ಮಹಾನ್ ವರದಾನವಾಗಿದೆ.
2028ರ ಚುನಾವಣೆ ಮೇಲೆ ಕಣ್ಣು!
ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಇದನ್ನು ಸರಿಪಡಿಸಿ ೨೦೨೮ರ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆಯನ್ನು ಡಿಕೆಶಿಗೆ ವಹಿಸಲು ಹೈಕಮಾಂಡ್ ಒಲವು ತೋರಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಡಿ.ಕೆ. ಶಿವಕುಮಾರ್ ಅವರು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಕ ಹಾಗೂ ಜ್ಯೋತಿಷಿ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ (ಗುರೂಜಿ) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಆಶೀರ್ವಾದ ಪಡೆದಿದ್ದಾರೆ.
“ಮುಖ್ಯಮಂತ್ರಿಯಾಗಿ ನೇಮಕವಾಗುವ ಅಧಿಕೃತ ಘೋಷಣೆಗೆ ಶಿವಕುಮಾರ್ ಕಾಯುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯದಲ್ಲಿ ಶೇ. ೩೩ ರಷ್ಟು ಮೀಸಲಾತಿ, ಭ್ರಷ್ಟಾಚಾರ ಮುಕ್ತ ಆಡಳಿತ ಹಾಗೂ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ನಾನು ಅವರಿಗೆ ಸಲಹೆ ನೀಡಿದ್ದೇನೆ.” ಎಂದುಜ್ಯೋತಿಷಿ ರಾಜಗುರು ಬೆಳ್ಳೂರು ಶಂಕರನಾರಾಯಣರವರು ಹೇಳಿದರು.
ಹೈಕಮಾಂಡ್‌ನ ಅಧಿಕೃತ ಆದೇಶಕ್ಕಾಗಿ ಇಡೀ ರಾಜ್ಯ ರಾಜಕೀಯ ವಲಯ ಹಾತೊರೆಯುತ್ತಿದ್ದು, ಕನಕಪುರ ಹಾಗೂ ರಾಜ್ಯಾದ್ಯಂತ ಡಿಕೆಶಿ ಅಭಿಮಾನಿಗಳು ಸಿಎಂ ಸ್ಥಾನವನ್ನು ಸಂಭ್ರಮಿಸಲು ಹಾರಗಳು ಹಾಗೂ ಪಟಾಕಿಗಳೊಂದಿಗೆ ತುದಿಗಾಲಲ್ಲಿ ನಿಂತಿದ್ದಾರೆ.
#FreedomTV #KarnatakaPolitics #DKShivakumar #Siddaramaiah #CongressCMChange #KarnatakaNews #BreakingNews #DKSforCM #HighCommandDecision #BangaloreNews #KannadaNews




